×
Ad

ರಫೇಲ್ ಡೀಲ್ 40 ಸಾವಿರ ಕೋಟಿ ರೂ.ಗಳ ಹಗರಣ: ಸಿದ್ದರಾಮಯ್ಯ

Update: 2018-08-26 15:24 IST

ಮೈಸೂರು, ಆ. 26: ರಕ್ಷಣಾ ಇಲಾಖೆಯಲ್ಲಿ ಆಗಿರುವ ರಫೇಲ್ ಡೀಲ್ ಹಗರಣದ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಹಗರಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇದು 40 ಸಾವಿರ ಕೋಟಿ ರೂ.ಗಳ ಹಗರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. 

ಮೈಸೂರಿನ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ನಂತರ ಮಾತನಾಡಿದರು.

ಈ ಹಗರಣದ ಬಗ್ಗೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಇದರಲ್ಲಿ ರಾಜಕೀಯ ಇಲ್ಲ. ಬಿಜೆಪಿಯ ಭ್ರಷ್ಟಾಚಾರದ ಮುಖವನ್ನು ಜನರಿಗೆ ತೋರಿಸುವುದು ಪಕ್ಷದ ಉದ್ದೇಶ. ಇದು ಸಣ್ಣ ಅವ್ಯವಹಾರ ಅಲ್ಲ. ದೇಶದ ರಕ್ಷಣಾ ಇಲಾಖೆಯಲ್ಲಿ ಭಾರಿ ಹಗರಣ ಇದಾಗಿದೆ ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್  63 ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಜಾರಿಗೆ ತಂದಿದ್ದು ಸಹ ಕಾಂಗ್ರೆಸ್. ಇದರ ಕಾರಣಕರ್ತರು ದಿವಂಗತ ರಾಜೀವ್ ಗಾಂಧಿಯವರು. ಅವರ ಪ್ರಯತ್ನದಿಂದ ಮಹಿಳೆಯರು, ಹಿಂದುಳಿದವರು ಹಾಗೂ ಇತರೆ ವರ್ಗದವರಿಗೆ ಮೀಸಲು ಸೌಲಭ್ಯ ದೊರೆತಿದೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲು ಸೌಲಭ್ಯ ದೊರೆಯುವಂತೆ ಮಾಡಿದ್ದು ಕಾಂಗ್ರೆಸ್. ಬಿಜೆಪಿಯವರು ಇದನ್ನು ವಿರೋಧ ಮಾಡಿದ್ದರು. ಬಿಜೆಪಿಯ ರಾಮಾಜೋಯೀಸ್ ಅವರೇ ಮೀಸಲು ಸೌಲಭ್ಯದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದರು. ರಾಜಕೀಯ ಹಾಗೂ  ಸರ್ಕಾರಿ ಸಂಸ್ಥೆಗಳಲ್ಲಿ ಜಾರಿಗೆ ತಂದಿರುವ ಮೀಸಲು ಸೌಲಭ್ಯವನ್ನು ಸದಾ ವಿರೋಧ ಮಾಡಿದವರು ಬಿಜೆಪಿಯವರು. ಮೀಸಲು ಸೌಲಭ್ಯ ಹಾಗೂ ಸಾಮಾಜಿಕ ನ್ಯಾಯಕ್ಕೆ ನಮ್ಮ ಪಕ್ಷ ಸದಾ ಬದ್ಧ ಎಂದು ಹೇಳಿದರು.

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾದ್ಯವಿಲ್ಲ. ಮೈಸೂರು ಮಹಾನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ 2530 ಕೋಟಿ ರೂ.ಗಳ ಅನುದಾನ ಒದಗಿಸಿತ್ತು. ನಗರದಲ್ಲಿ ತಲೆ ಎತ್ತಿ ನಿಂತಿರುವ ಸರ್ಕಾರದ ಹೊಸ ಕಟ್ಟಡಗಳೇ ಇದಕ್ಕೆ ಸಾಕ್ಷಿ. ಮಾಲಿಕೆಯಲ್ಲಿ ಜೆಡಿಎಸ್, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿಯಲ್ಲಿ ಮೈಸೂರು ನಂಬರ್ ಒನ್ ಆಗಿದ್ದರೆ ಅದಕ್ಕೆ ನಮ್ಮ ಸರ್ಕಾರ ಕಾರಣ. ಇದನ್ನು ಮನಗಂಡು ಮೈಸೂರಿನ ಮತದಾರರು ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಕೈ ಹಿಡಿಯಬೇಕು. ಅವರು ಆಶೀರ್ವಾದ ಮಾಡುವ  ವಿಶ್ವಾಸವಿದೆ ಎಂದು ನುಡಿದರು.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯವರ ಅಪಪ್ರಚಾರದಿಂದ ನಮಗೆ  ಸೋಲಾಯಿತು. ಬಿಜೆಪಿಯ ಪೊಳ್ಳುತನ ಜನರಿಗೆ ಈಗ ಅರ್ಥವಾಗಿದೆ. ಹೀಗಾಗಿ ಅವರು ಪಾಲಿಕೆ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ಮೈಸೂರು ನಗರದ ಜನರ ನಾಡಿ ಮಿಡಿತ ಗೊತ್ತಿದೆ ಎಂದು ಹೇಳಿದರು.

ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಒಂದು ನಿರ್ಧಾರ ಮಾಡಿದೆ. ಖಾಸಗಿ ಹಣಕಾಸು ಲೇವಾದಾರರಿಂದ ರೈತರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಕಾನೂನು ಜಾರಿಗೆ ತರಲು ಹೊರಟಿದೆ. ಸಾಲ ಮನ್ನಾ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದ್ದೆ. ಬಡ್ತಿ ಮೀಸಲು ಸಂಬಂಧ ಕಾನೂನು ರೂಪಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡಲಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಶೀಘ್ರವಾಗಿ ನಡೆಯಲಿದೆ ಎಂದು ಹೇಳಿದರು.

ರಕ್ಷಣಾ ಸಚಿವರು ಕೊಡಗಿಗೆ ಬಂದು ಹೋದರು. ಆದರೆ ನಯಾಪೈಸೆ ಪರಿಹಾರ ಘೋಷಣೆ ಮಾಡಲಿಲ್ಲ. ಇದು ಸರಿಯೇ? ಪರಿಹಾರ ಘೋಷಣೆ ಮಾಡುವುದು ಕೇಂದ್ರದ ಜವಾಬ್ದಾರಿ ಅಲ್ಲವೇ ? ಶೀಘ್ರವೇ ಕೇಂದ್ರ ಸರ್ಕಾರ ಕೊಡಗಿಗೆ ಒಂದು ಸಾವಿರ ಕೋಟಿ ರೂ. ಗಳ ಪರಿಹಾರ ಘೋಷಿಸಬೇಕು. ಕೊಡಗಿನ ಜನರ ನೆರವಿಗೆ ನಿಂತಿರುವ ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು. ಕೂಡಗಿನಲ್ಲಿ ಇಷ್ಟು ಅನಾಹುತ ಆಗಿರುವಾಗ ಕೇಂದ್ರ ಸರ್ಕಾರ ತುರ್ತಾಗಿ ಪರಿಹಾರ ಘೋಷಣೆ ಮಾಡಬೇಕಿತ್ತು. ನಾವು ಕೊಡುವ ಮನವಿ ಪತ್ರಕ್ಕಾಗಿ ಕಾಯಬೇಕೇ ? ಕೊಡಗಿಗೆ ಬಂದಾಗ ರಕ್ಷಣಾ ಸಚಿವರ ನಡವಳಿಕೆ ಅತಿಯಾಗಿತ್ತು. ಕೇಂದ್ರ ಸಚಿವರ ರೀತಿ ಅವರು ನಡೆದುಕೊಳ್ಳಲಿಲ್ಲ. ಪರಿಹಾರ ನೀಡುವ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ರಕ್ಷಣಾ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದುಕೊಂಡ ರೀತಿ ಸರಿಯಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಆ ರೀತಿ ಮಾಡಬಾರದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News