ಚಿಕ್ಕಮಗಳೂರು: ಸಂಚಾರಿ ಠಾಣೆ ಪೇದೆಯಿಂದ ವ್ಯಕ್ತಿಗೆ ಹಲ್ಲೆ; ಪೇದೆ ಅಮಾನತು
ಚಿಕ್ಕಮಗಳೂರು, ಆ. 26: ಕ್ಷುಲ್ಲಕ ವಿಷಯಕ್ಕೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ವ್ಯಕ್ತಿಯೋರ್ವನಿಗೆ ನಡು ರಸ್ತೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಘಟನೆ ರವಿವಾರ ನಡೆದಿದೆ.
ನಗರದ ಸಂಚಾರಿ ಠಾಣೆಯ ಪೇದೆ ಸುಭಾಷ್ ಆಲಮಟ್ಟಿ ಎಂಬವರು ರವಿವಾರ ನಗರದ ಎಂಇಸ್ ಕಾಲೇಜು ವೃತ್ತದಲ್ಲಿ ಕರ್ತವ್ಯದಲ್ಲಿದ್ದ ವೇಳೆ ವಾಹನ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಬೈಕ್ ಸವಾರರೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ತಿಳಿದು ಬಂದಿದೆ.
ಪೇದೆಯ ಮಾತಿಗೆ ಕೋಪಗೊಂಡ ಬೈಕ್ ಸವಾರ ಗೌರವದಿಂದ ಮಾತನಾಡುವಂತೆ ಹೇಳಿದ್ದಕ್ಕೆ ಕುಪಿತನಾದ ಪೇದೆ, ಎದುರುತ್ತರ ನೀಡುತ್ತೀಯ ಎಂದು ಧಮ್ಕಿ ಹಾಕಿದ್ದಲ್ಲದೇ ಮನಸೋ ಇಚ್ಛೆ ಸಾರ್ವಜನಿಕರ ಎದುರು ನಡುರಸ್ತೆಯಲ್ಲಿಯೇ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ವೀಡಿಯೊ ವೈರಲ್ ಆಗಿದೆ. ಪೇದೆ ಹಲ್ಲೆ ಮಾಡುತ್ತಿದ್ದ ವೇಳೆ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರ ಮೇಲೂ ಎರಗಿದ ಪೇದೆ ಹಲ್ಲೆಗೆ ಮುಂದಾಗಿ ವೀಡಿಯೊ ಡಿಲಿಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದೆ.
ಪೇದೆ ಬೈಕ್ ಸವಾರನಿಗೆ ಹಲ್ಲೆ ಮಾಡುತ್ತಿರುವ ದೃಶ್ಯದ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದ್ದು, ವ್ಯಕ್ತಿಗೆ ಥಳಿಸುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಪೇದೆ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ನಗರದ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನೆ ಸಂಬಂಧ ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ವರದಿ ನೀಡಿದ್ದಾರೆ.
ಪೇದೆ ಅಮಾನತು: ಚಿಕ್ಕಮಗಳೂರು ನಗರದ ಶೃಂಗಾರ್ ಸರ್ಕಲ್ ಹತ್ತಿರ ಓರ್ವ ಸಾರ್ವಜನಿಕನ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ತಿಳಿದಿದ್ದು, ಪ್ರಾಥಮಿಕ ವಿಚಾರಣೆಯಿಂದ ಹಲ್ಲೆ ಮಾಡಿರುವುದು ನಿಜವೆಂದು ಕಂಡು ಬಂದಿರುವುದರಿಂದ ಸಾರ್ವಜನಿಕನ ಮೇಲೆ ಹಲ್ಲೆ ನಡೆಸಿದ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯಾದ ಸುಭಾಷ್ ಆಲಮಟ್ಟಿ ಯನ್ನು ಈ ಕೂಡಲೇ ಕರ್ತವ್ಯದಿಂದ ಅಮಾನತು ಪಡಿಸಲಾಗಿದೆ.
- ಲಕ್ಷ್ಮೀ ಪ್ರಸಾದ್, ಎಸ್ಪಿ, ಚಿಕ್ಕಮಗಳೂರು