ಮೂಡಿಗೆರೆ: ರಸ್ತೆ, ಸೇತುವೆಯಿಲ್ಲದೆ ತೆಪ್ಪದಲ್ಲಿ ಮೃತದೇಹ ಸಾಗಿಸಿದ ಸಂಬಂಧಿಕರು
ಚಿಕ್ಕಮಗಳೂರು, ಆ.26: ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭದ್ರಾ ನದಿಯ ತಟದಲ್ಲಿರುವ ಹೊಳೆಕುಡಿಗೆ(ಆಮ್ತಿಗುಡ್ಡ) ಗ್ರಾಮಕ್ಕೆ ಜಿಲ್ಲಾಡಳಿತ ಸುಸಜ್ಜಿತ ರಸ್ತೆ, ಸೇತುವೆ ಕಲ್ಪಿಸಿ ಕೊಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರವಿವಾರ ಮೃತರಾದ ಗ್ರಾಮದ ವೃದ್ಧೆಯ ಮೃತದೇಹವನ್ನು ತುಂಬಿ ಹರಿಯುತ್ತಿರುವ ನದಿಯಲ್ಲಿ ತೆಪ್ಪದ ಮೂಲಕ ಸಾಗಿಸಿದ ಘಟನೆ ವರದಿಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳೆಕೂಡಿಗೆ ಗ್ರಾಮ ಮೂಡಿಗೆರೆ ತಾಲೂಕಿನ ಕೂವೆ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಬಾಳೆಹೊನ್ನೂರು ಪಟ್ಟಣ ಹಾಗೂ ಕೊಟ್ಟಿಗೆಹಾರ ಸಂಪರ್ಕ ರಸ್ತೆಯಲ್ಲಿನ ಗಬ್ಗಲ್ ಎಂಬಲ್ಲಿ ಹರಿಯುವ ಭದ್ರಾನದಿಯಾಚೆ ಇರುವ ಈ ಗ್ರಾಮದಲ್ಲಿ 8 ಗಿರಿಜನ ಕುಟುಂಬಗಳು ವಾಸ ಇವೆ. ವಿಪರ್ಯಾಸ ಎಂದರೆ ಈ ಗ್ರಾಮ ಸಂಪರ್ಕಿಸಲು ಭದ್ರಾ ನದಿಯನ್ನು ದಾಟಬೇಕಿದ್ದು, ನದಿ ದಾಟಲು ಯಾವುದೇ ಸೇತುವೆ, ರಸ್ತೆಯಂತಹ ಸೌಲಭ್ಯ ಇಲ್ಲದಿರುವುದರಿಂದ ಈ ಕುಟುಂಬಗಳು ಮಳೆಗಾಲದದಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳು ಮೂರು ತಿಂಗಳು ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿಯುವಂತಾಗಿದೆ. ಶಾಲೆಗೆ ಹೋಗುವ ಇಲ್ಲಿನ 8 ವಿದ್ಯಾರ್ಥಿಗಳು 2 ತಿಂಗಳು ಶಾಲೆಗೆ ಗೈರಾಗುವುದು ವಾಡಿಕೆ ಎಂಬಂತಾಗಿದೆ. ಈ ಗ್ರಾಮದ ಸಮಸ್ಯೆ ಬಗ್ಗೆ 'ವಾರ್ತಾಭಾರತಿ' ಈ ಹಿಂದೆಯೇ ವಿಸ್ತಾರವಾದ ಸುದ್ದಿ ಪ್ರಕಟಿಸಿ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು. ಆದರೆ ಈ ಬಗ್ಗೆ ಯಾವ ಅಧಿಕಾರಿಗಳೂ, ಶಾಸಕರೂ ಇದುವರೆಗೂ ಕ್ರಮ ವಹಿಸಿಲ್ಲ.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ನಿವಾಸಿಗಳು ಇಂದಿಗೂ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದು, ಗ್ರಾಮದ ಲಕ್ಷ್ಮಮ್ಮ ಎಂಬವರು ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಸಂಬಂಧಿಕರು ತೆಪ್ಪದ ಮೂಲಕ ಭದ್ರಾ ನದಿ ದಾಟಿಸಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಲಕ್ಷ್ಮಮ್ಮ ಅವರ ಮೃತ ದೇಹವನ್ನು ರವಿವಾರ ಮಧ್ಯಾಹ್ನದ ವೇಳೆಗೆ ಗಬ್ಗಲ್‍ಗೆ ತಂದಿದ್ದರು. ಗ್ರಾಮಕ್ಕೆ ತೆರಳಲು ರಸ್ತೆ, ಸೇತುವೆ ಸೌಲಭ್ಯ ಇಲ್ಲದ ಕಾರಣ ಮೃತ ದೇಹವನ್ನು ತೆಪ್ಪದ ಮೂಲಕ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಭದ್ರಾ ನದಿಯನ್ನು ದಾಟಿ ಹೊಳೆಕೂಡಿಗೆ ಗ್ರಾಮಕ್ಕೆ ಕೊಂಡೊಯ್ದಿದ್ದಾರೆಂದು ತಿಳಿದು ಬಂದಿದೆ.
ಗ್ರಾಮಸ್ಥರು ಮೃತ ದೇಹವನ್ನು ತೆಪ್ಪದಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಟ್ಟಿದ್ದಾರೆ. ವೀಡಿಯೋ ಗಮನಿಸಿದ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಬಿ ಹರಿಯುವ ಭದ್ರಾನದಿಯಾಚೆಗಿನ ಹೊಳೆಕುಡಿಗೆ ಗ್ರಾಮದಲ್ಲಿ ಎಂಟು ಮಲೆಕುಡಿಯ ಸಮುದಾಯದ ಕುಟುಂಬಗಳಿವೆ. ಪ್ರಾಭಾವಿ ಭೂ ಮಾಲಕರೊಬ್ಬರ ಕಾಫಿ ತೋಟಕ್ಕೆ ಹೊಂದಿಕೊಂಡಂತೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಸಿಕ್ಕ ಅಲ್ಪಸ್ವಲ್ಪ ಜಮೀನುಗಳಲ್ಲಿ ಈ ಕುಟುಂಬಗಳು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಈ ಗ್ರಾಮದಲ್ಲಿ ಮಲೆಕುಡಿಯ ಸಮುದಾಯದ 35ಕ್ಕೂ ಹೆಚ್ಚು ಜನರು ವಾಸವಿದ್ದು, ಗ್ರಾಮಗಳ ಜನರು ನಾಗರಿಕ ಸೌಲಭ್ಯಗಳಿಗಾಗಿ ಸಮೀಪದ ಮಾಗುಂಡಿ, ಗಬ್ಗಲ್, ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಮೂಡಿಗೆರೆ ಪಟ್ಟಣವನ್ನು ಅವಲಂಬಿಸಿದ್ದಾರೆ. ವಿಪರ್ಯಾಸವೆಂದರೆ ಈ ಗ್ರಾಮಗಳ ಜನರು ಈ ಪಟ್ಟಣಗಳಿಗೆ ಬರಲು ಭದ್ರಾನದಿ ದಾಟಿ ಬರಬೇಕಿದ್ದು, ಯಾವುದೇ ಸೇತುವೆ ವ್ಯವಸ್ಥೆ ಇಲ್ಲವಾಗಿದೆ. ಇಂದಿಗೂ ಜೀವವನ್ನು ಮುಷ್ಠಿಯಲ್ಲಿ ಹಿಡಿದುಕೊಂಡು ತೆಪ್ಪದ(ಉಕ್ಕಡ) ಮೂಲಕ ನದಿ ದಾಟಬೇಕಾದ ನರಕಸದೃಶ ಯಾತನೆಯಲ್ಲಿ ದಿನ ಕಳೆಯುತ್ತಿರುವುದು ಒಂದೆಡೆಯಾದರೇ, ನದಿ ದಾಟಿ ಮುಖ್ಯರಸ್ತೆಗೆ ಬರಲು ಇರುವ ಸರಕಾರಿ ಕಚ್ಚಾ ರಸ್ತೆಯನ್ನು ಪ್ರಭಾವಿ ಭೂ ಮಾಲಕರು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿರುವುದರಿಂದ ಈ ರಸ್ತೆ ಇಲ್ಲಿನ ಗಿರಿಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ನಾವು ಕಳೆದ 30 ವರ್ಷಗಳಿಂದ ಹೊಳೆಕುಡಿಗೆ ಗ್ರಾಮದಲ್ಲಿ ತೂಗು ಸೇತುವೆ ನಿರ್ಮಿಸಲು ಹಾಗೂ ಪ್ರಭಾವಿಗಳ ಹಿಡಿತದಲ್ಲಿರುವ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಶಾಸಕರಿಗೆ ಅರ್ಜಿ ಕೊಡುತ್ತಲೇ ಬಂದಿದ್ದೀವಿ. ಆದರೆ ಐದು ವರ್ಷಗಳಿಗೊಮ್ಮೆ ಓಟು ಕೇಳಲು ಬರುವ ಜನಪ್ರತಿನಿಧಿಗಳು, ಯಾವತ್ತೂ ನಮ್ಮ ಗೋಳು ಕೇಳಲು ಬಂದಿಲ್ಲ. ಮಾಜಿ ಶಾಸಕ, ಕುಮಾರಸ್ವಾಮಿ, ಹಾಲಿ ಶಾಸಕ ನಿಂಗಯ್ಯ ಅವರಿಗೂ ಮನವಿ ನೀಡಿದ್ದೇವೆ, ಜಿಲ್ಲಾಡಳಿತ ಒಮ್ಮೆ ನಮ್ಮ ಸಮಸ್ಯೆಗೆ ಸ್ಪಂದಿಸಿ ರಸ್ತೆಯ ಸರ್ವೇ ಮಾಡಿಸಿದೆ. ರಸ್ತೆ ಜಾಗ ಸರಕಾರಿ ಜಾಗವಾಗಿದ್ದರೂ ಸ್ಥಳೀಯ ಭೂ ಮಾಲಕರು ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ಪ್ರಭಾವದಿಂದ ಜಿಲ್ಲಾಡಳಿತ ನಮ್ಮ ಸಮಸ್ಯೆಗೆ ಇನ್ನೂ ಪರಿಹಾರ ಒದಗಿಸಿಲ್ಲ. ಬಡವರ ಪ್ರಾಣಕ್ಕೆ ಈ ರಾಜಕಾರಣಿಗಳು ನಯಾ ಪೈಸೆಯ ಬೆಲೆ ಕೊಡಲ್ಲ. ಈ ಬಾರಿ ನಮ್ಮದು ಮಾಡು ಇಲ್ಲವೇ ಮಡಿ ಹೋರಾಟ, ಇಲ್ಲಿ ರಸ್ತೆ, ಸೇತುವೆ ನಿರ್ಮಿಸಿಕೊಡದಿದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುತ್ತೇವೆ.
- ಬಾಬು ಕುಡಿಯ, ರಾಜ್ಯ ಮಲೆಕುಡಿಯ ಸಂಘದ ಸದಸ್ಯ
ಹೊಳೆಕುಡಿಗೆ ಗ್ರಾಮದ ಗಿರಿಜನರ ಮನವಿ, ದೂರಿನ ಮೇರೆಗೆ 2017ರಲ್ಲಿ ಗಿರಿಜನ ಇಲಾಖೆಯ ಯೋಜನಾಧಿಕಾರಿ ಚಂದ್ರಶೇಖರ್ ಎಂಬವರು ಮೂಡಿಗೆರೆ ತಾಲೂಕು ಸಮಾಜಕಲ್ಯಾಣಾಧಿಕಾರಿ, ಕೂವೆ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಡಿಸಿಗೆ ಸಲ್ಲಿಸಿದ್ದಾರೆ. ವರದಿಯಲ್ಲಿ ಭೂ ಮಾಲಕರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ ತಿರುಗಾಡುವ ರಸ್ತೆಯನ್ನೂ ಒತ್ತುವರಿ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಬಳಿ ದಾಖಲೆಗಳಿವೆ. ಆದರೂ ಜಿಲ್ಲಾಡಳಿತ ಈ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗದಿರುವುದರ ಮರ್ಮವೇನೆಂಬುದು ತಿಳಿಯುತ್ತಿಲ್ಲ.
- ಗೋಪಾಲ್, ಗಿರಿಜನ ಮುಖಂಡ, ಮೂಡಿಗೆರೆ