ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿದ್ದರೂ 2ನೆ ಮದುವೆ ಸಿಂಧು: ಸುಪ್ರೀಂ ಕೋರ್ಟ್

Update: 2018-08-26 13:31 GMT

ಹೊಸದಿಲ್ಲಿ,ಆ.26: ಮೊದಲ ಮದುವೆಯ ದಂಪತಿ ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕಗೊಂಡಿದ್ದರೆ ಮತ್ತು ತಮ್ಮ ನಿರ್ಧಾರವನ್ನು ಪ್ರಶ್ನಿಸದಿರಲು ನಿರ್ಣಯಿಸಿದ್ದರೆ ಅವರ ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದರೂ ಎರಡನೇ ಮದುವೆ ಸಿಂಧುವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಹಿಂದು ವಿವಾಹ ಕಾಯ್ದೆಯನ್ನು ವ್ಯಾಖ್ಯಾನಿಸಿದ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಮತ್ತು ಎಲ್.ನಾಗೇಶ್ವರ ರಾವ್ ಅವರ ಪೀಠವು,ಆದರೆ ಮೇಲ್ಮನವಿಯ ಇತ್ಯರ್ಥಕ್ಕೊಳಪಟ್ಟು ನ್ಯಾಯಾಲಯವು ತನ್ನ ಆದೇಶವನ್ನು ಅಂತಿಮಗೊಳಿಸಿದಾಗ ಮಾತ್ರ ವಿವಾಹ ವಿಚ್ಛೇದನವು ಪೂರ್ಣಗೊಳ್ಳುತ್ತದೆ. ವಿವಾಹ ವಿಚ್ಛೇದನ ಪ್ರಕರಣದಲ್ಲಿ ಮೇಲ್ಮನವಿಯು ವಜಾಗೊಂಡ ನಂತರವೇ ಎರಡನೇ ಮದುವೆಯು ಕಾನೂನುಬದ್ಧವಾಗುತ್ತದೆ ಎಂದು ಹೇಳಿದೆ.

ತನ್ನ ಪತಿಯ ಮೊದಲ ವಿವಾಹದ ವಿಚ್ಛೇದನ ಪ್ರಕರಣದಲ್ಲಿ ಮೇಲ್ಮನವಿಯು ಇತ್ಯರ್ಥಗೊಳ್ಳುವ ಮೊದಲೇ ಆತ ತನ್ನನ್ನು ಎರಡನೇ ಮದುವೆ ಮಾಡಿಕೊಂಡಿರುವ ಕಾರಣದಿಂದ ವಿಚ್ಛೇದನ ಕೋರಿ ಎರಡನೇ ಹೆಂಡತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ತೀರ್ಪನ್ನು ಪ್ರಕಟಿಸಿದೆ.

ಪತಿ ತನ್ನ ಮೊದಲ ವಿಚ್ಛೇದನದ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದನಾದರೂ ಬಳಿಕ ತನ್ನ ಮೊದಲ ಹೆಂಡತಿಯೊಂದಿಗೆ ವಿವಾದವನ್ನು ಬಗೆಹರಿಸಿಕೊಂಡಿದ್ದ ಆತ ತನ್ನ ಮೇಲ್ಮನವಿಯನ್ನು ಹಿಂದೆಗೆದುಕೊಳ್ಳಲು ಅನುಮತಿ ಕೋರಿ 2011,ನ.28ರಂದು ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯ ಕುರಿತು ನ್ಯಾಯಾಲಯವು ಅಂತಿಮ ಆದೇಶವನ್ನು ಹೊರಡಿಸುವ ಮುನ್ನವೇ 2011,ಡಿ.6ರಂದು ಆತ ಎರಡನೇ ಮದುವೆಯಾಗಿದ್ದ.

ಆದರೆ ಆತನ ಎರಡನೇ ಮದುವೆಯೂ ಸಂಕಷ್ಟಕ್ಕೆ ಸಿಲುಕಿದ್ದು, ಆತನ ಮೊದಲ ವಿಚ್ಛೇದನ ಪ್ರಕರಣದ ಕಲಾಪಗಳು ಬಾಕಿಯಿರುವಂತೆಯೇ ತನ್ನನ್ನು ಮದುವೆಯಾಗಿದ್ದರಿಂದ ಈ ಮದುವೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಎರಡನೇ ಹೆಂಂಡತಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಳು.

ಪತಿಯ ಉದ್ದೇಶ ಆತನ ಅರ್ಜಿಯಿಂದ ಸ್ಪಷ್ಟವಾಗಿದೆ. ಮೊದಲ ಪತ್ನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡ ಬಳಿಕ ಆತ ವಿಚ್ಛೇದನದ ಆದೇಶವನ್ನು ಪ್ರಶ್ನಿಸಲು ಉದ್ದೇಶಿಸಿರಲಿಲ್ಲ. ಮೇಲ್ಮನವಿಯನ್ನು ಹಿಂದೆಗೆದುಕೊಳ್ಳಲು ಅನುಮತಿಯನ್ನು ಕೋರಿ ಆತ ಸಲ್ಲಿಸಿದ್ದ ಅರ್ಜಿಯು ಆತನ ಉದ್ದೇಶವನ್ನು ಸ್ಪಷ್ಟಗೊಳಿಸಿದೆ. ಆತ ಮೇಲ್ಮನವಿಗೆ ಸಂಬಂಧಿಸಿದಂತೆ ವಿಧ್ಯುಕ್ತ ಆದೇಶವು ಹೊರಬೀಳುವವರೆಗೆ ಕಾಯಬೇಕಿತ್ತು ಅಥವಾ 6-12-2011ರ ಆತನ ಮದುವೆಯು ಅಸಿಂಧುವಾಗಿದೆ ಎಂದು ಹೇಳುವಂತಿಲ್ಲ ಎಂದು ಶುಕ್ರವಾರ ನೀಡಿದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಆದ್ದರಿಂದ ಆತ ಅರ್ಜಿಯನ್ನು ಸಲ್ಲಿಸಿದ್ದ 2011,ನ.28ರಂದೇ ತನ್ನ ಮೇಲ್ಮನವಿಯನ್ನು ಹಿಂದೆಗೆದುಕೊಂಡಿದ್ದ ಎಂದು ಪರಿಗಣಿಸಲಾಗಿದೆ. ಆತನ ಎರಡನೇ ಮದುವೆಯ ದಿನದಂದು ಮೊದಲ ಪತ್ನಿಯನ್ನು ಬದುಕಿದ್ದ ಸಂಗಾತಿ ಎಂದು ಪರಿಗಣಿಸುವಂತಿಲ್ಲ. ಆದ್ದರಿಂದ ಕಾಯ್ದೆಯ ಕಲಂ 5(ಐ) ಅನ್ನು ಅನ್ವಯಿಸುವಂತಿಲ್ಲ ಮತ್ತು ಎರಡನೇ ಮದುವೆಯನ್ನು ಅಸಿಂಧು ಎಂದು ಘೋಷಿಸುವಂತಿಲ್ಲ ಎಂದೂ ಪೀಠವು ಸ್ಪಷ್ಟಪಡಿಸಿತು.

ಸಾಮಾಜಿಕ ಕಲ್ಯಾಣ ಶಾಸನ

ಹಿಂದು ವಿವಾಹ ಕಾಯ್ದೆಯು ಸಾಮಾಜಿಕ ಕಲ್ಯಾಣ ಶಾಸನವಾಗಿದೆ,ಹೀಗಾಗಿ ಅದನ್ನು ಶಿಲಾಶಾಸನವೆಂಬಂತೆ ಭಾವಿಸಿ ವ್ಯಾಖ್ಯಾನಿಸುವಂತಿಲ್ಲ. ಅದನ್ನು ಶಾಸನದ ಉದ್ದೇಶವನ್ನು ಈಡೇರಿಸುವ ರೀತಿಯಲ್ಲಿ ವ್ಯಾಖ್ಯಾನಿಸಬೇಕಾಗುತ್ತದೆ. ಈ ಕಾಯ್ದೆಯು ಸಾಮಾಜಿಕ ಸುಧಾರಣೆಗಳನ್ನು ತರುವ ಉದ್ದೇಶವನ್ನು ಹೊಂದಿದೆ ಎಂದು ತೀರ್ಪು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News