ಕಳಸ: ಭೂ ಕುಸಿತಕ್ಕೆ ರೈತ ಕುಟುಂಬಗಳು ಕಂಗಾಲು

Update: 2018-08-26 13:51 GMT

ಚಿಕ್ಕಮಗಳೂರು, ಆ.26: ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಕ್ಷೀಣಿಸಿದ್ದರೂ ಅತಿವೃಷ್ಟಿಯ ಪರಿಣಾಮ ಎಂಬಂತೆ ಭೂ ಕುಸಿತದಂತಹ ಘಟನೆಗಳಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಕಷ್ಟು ಮನೆ ಹಾಗೂ ಕಾಫಿ, ಅಡಿಕೆ ತೋಟಗಳಿಗೆ ವ್ಯಾಪಕ ಹಾನಿಯಾಗುತ್ತಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದರೂ ರಾತ್ರಿ ಹಾಗೂ ಬೆಳಗಿನ ವೇಳೆ ಸಾಧಾರಣವಾಗಿ ಮಳೆ ಸುರಿಯುತ್ತಲೇ ಇದೆ. ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಳಸ ಸಮೀಪದ ತಲಗೋಡು ಗ್ರಾಮದ ಕೆಲವೆಡೆ ರವಿವಾರ ಬೆಳಗ್ಗೆ ಭೂ ಕುಸಿತ ಉಂಟಾಗಿದ್ದು, ಇದು ಗ್ರಾಮಸ್ಥರನ್ನು ನಿದ್ದೆಗೆಡುವಂತೆ ಮಾಡಿದೆ.

ಮೂಡಿಗೆರೆ ತಾಲೂಕಿನ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಗೋಡು ಗ್ರಾಮದ ಕಚ್ಚುಕುಡಿಗೆ ಕೆ.ಕೆ.ಸುಧಾಕರ  ಎಂಬವರಿಗೆ ಸೇರಿದ 3ಎಕರೆ ಜಮೀನಿನಲ್ಲಿ ಅಡಿಕೆ, ಕಾಫಿ ಕೃಷಿ ಮಾಡಿದ್ದಾರೆ. ಮಳೆಗಾಲದ ಆರಂಭದಲ್ಲಿ ಈ ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಸಣ್ಣ ಗಾತ್ರದ ಬಿರುಕುಗಳು ಕಾಣಿಸಿಕೊಂಡಿದ್ದವು. ಆದರೆ ಕಳೆದ ಎರಡು ದಿನಗಳಿಂದ ಬೃಹತ್ ಗಾತ್ರದ ಬಿರುಕುಗಳು ಕಾಣಿಸಿಕೊಂಡು ನೀರಿನ ಬುಗ್ಗೆಗಳು ಮೇಲೆ ಬರುತ್ತಿದ್ದು, ನೀರು ಇಡೀ ತೋಟವನ್ನು ಆಕ್ರಮಿಸಿಕೊಂಡಿದೆ. ಅಲ್ಲದೇ ಮೂರು ಎಕರೆ  ಜಮೀನಿನಲ್ಲಿ ಕೆಲವೆಡೆ ಭೂ ಕುಸಿತ ಉಂಟಾಗಿದ್ದು, ಈ ವೇಳೆ ಭೂಮಿಯು ಕಂಪಿಸಿದ ಅನುಭವ ಆಯಿತೆಂದು ಸುಧಾಕರ್ ತಿಳಿಸಿದ್ದಾರೆ.

ಭೂ ಕುಸಿತದಿಂದಾಗಿ ತೋಟದಲ್ಲಿದ್ದ ನೂರಾರು ಅಡಿಕೆ ಮರಗಳು ಧರೆಗುರುಳಿದ್ದು, ಭೂ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಒಂದರ ಮೇಲೊಂದರಂತೆ ಒರಗಿ ಕುಳಿತಿದ್ದು, ನೆಲಕ್ಕುರುಳುವ ಭೀತಿಯಿಂದ ಸುಧಾಕರ್ ಕಂಗಾಲಾಗಿದ್ದಾರೆ. ತೋಟದ ಭೂಮಿ ದಿನದಿಂದ ದಿನಕ್ಕೆ  ಜಾರಿಕೊಂಡು ಕುಸಿದು  ಹೋಗುತ್ತಿದ್ದು, ಸುಧಾಕರ್ ಅವರ ಮನೆಯ ಸಮೀಪದ ಜಾಗದಲ್ಲೂ ಬಿರುಕುಗಳು ಕಾಣಿಸಿ ಕೊಂಡಿವೆ. ಈ ತೋಟದ ಸಮೀಪದಲ್ಲಿ ಹದಿನೈದು ಪರಿಶಿಷ್ಟರ ಕುಟುಂಬಗಳು ವಾಸವಿದ್ದು, ನಿವಾಸಿಗಳೂ ಭೂ ಕುಸಿತದಿಂದಾಗಿ ಕಂಗಾಲಾಗಿದ್ದಾರೆ.

ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಕೆಹಿತ್ಲು ಎಂಬಲ್ಲಿ ರವಿವಾರ ಬೆಳಗ್ಗೆ ಭಾರಿ ಗಾತ್ರದ ಗುಡ್ಡ ಜರಿದು ಬಿದ್ದಿದೆ. ಈ ಗುಡ್ಡದ ಸಮೀಪವೇ ಹಳ್ಳವೊಂದು ಹರಿಯುತ್ತಿದ್ದು, ಈ ಹಳ್ಳ ಮುಚ್ಚುಗಡೆಯಾಗಿ ಅಡಿಕೆಹಿತ್ಲುವಿನ ಕೃಷ್ಣಮೂರ್ತಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಹಳ್ಳದ ನೀರು ಹರಿದುಹೋಗುತ್ತಿದೆ. ಇದರಿಂದಾಗಿ ನೂರಾರು ಅಡಿಕೆ ಮರಗಳು ಜಲಾವೃತಗೊಂಡಿವೆ. ಗುಡ್ಡ ಕುಸಿಯುತ್ತಿರುವುದರಿಂದ ತಲಗೋಡು ಗ್ರಾಮದ ವಾಡುವಾರೆ ಲೋಕಯ್ಯ ಎಂಬವರ ಜಮೀನಿನಲ್ಲಿದ್ದ ಅಡಿಕೆ ಮರ ಹಾಗೂ ಕಾಫಿ ಗಿಡಗಳು ಮಣ್ಣು ಪಾಲಾಗಿವೆ. ಪಕ್ಕದಲ್ಲಿಯೇ ಇದ್ದ ಇವರ ಮನೆಗೂ ಅಪಾಯವಿದ್ದು, ಸದ್ಯ ಕುಟುಂಬಸ್ಥರು ಮನೆ ತೊರೆದು ಬೇರೆಡೆ ವಾಸವಿದ್ದಾರೆ.

ದಿನದಿಂದ ದಿನಕ್ಕೆ ಭೂಮಿಯಲ್ಲಿ ಬಿರುಕುಗಳು ಹೆಚ್ಚಾಗಿ ಅಡಿಕೆ ಮರಗಳು ಒಂದರಮೇಲೊಂದು ಬೀಳಲಾರಂಬಿಸಿವೆ. ಸುಮಾರು ಮೂರು ಎಕರೆ ಭೂಮಿಯಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡು ಭೂಮಿ ಸಂಪೂರ್ಣ ಜಾರಿಕೊಂಡು ಹೋಗುತ್ತಿದೆ. ಮನೆ ಸಮೀಪವೂ ಬಿರುಕುಗಳು ಕಾಣಿಸಿಕೊಂಡಿವೆ. ತಜ್ಞರ ತಂಡ ಬಂದು ಇದನ್ನು ಪರಿಶೀಲನೆ ಮಾಡಬೇಕಾಗಿದೆ.
-ಕೆ.ಕೆ.ಸುಧಾಕರ, ಜಮೀನು ಮಾಲಕ ಕಚ್ಚುಕುಡಿಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News