×
Ad

ಕೊಡಗು: ಮಳೆ ನಿಂತರೂ ನಿಲ್ಲದ ಆತಂಕ; ಹಾನಿ ಪ್ರದೇಶಗಳಿಗೆ ಜನಪ್ರತಿನಿಧಿಗಳ ಭೇಟಿ

Update: 2018-08-26 19:44 IST

ಮಡಿಕೇರಿ,ಆ.26 : ಕೊಡಗು ಜಿಲ್ಲೆಯನ್ನು ತಲ್ಲಣಗೊಳಿಸಿದ ಮಹಾಮಳೆ ಕಳೆದ ನಾಲ್ಕು ದಿನಗಳಿಂದ ಸುಮ್ಮನಾಗಿದ್ದರೂ ನೆಲೆ ಕಳೆದುಕೊಂಡವರ ಮನದ ಆತಂಕ ಕಡಿಮೆಯಾಗಿಲ್ಲ. ಗುರಿ ಕಾಣದ ಬದುಕು ಮುಂದೆ ಹೇಗೆ ಎನ್ನುವ ನಿರಾಶೆಯ ಆಲೋಚನೆಗಳು ನಿರಾಶ್ರಿತರನ್ನು ಕಾಡುತ್ತಲೇ ಇದೆ. 

ಈ ನಡುವೆ ವಿವಿಧ ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನೊಂದವರಿಗೆ ಅಭಯ ನೀಡುತ್ತಲೇ ಬರುತ್ತಿದ್ದು, ರಾಜಕಾರಣಿಗಳ ಭೇಟಿ ಕಾರ್ಯಕ್ರಮ ಹೆಚ್ಚಾಗುತ್ತಲೇ ಇದೆ. ಸಂಸದ ಪ್ರತಾಪ್ ಸಿಂಹ ಹೆಚ್ಚು ಹಾನಿಗೊಳಗಾಗಿರುವ ಮಂಗಳೂರು ರಸ್ತೆಯ ತಾಳತ್ತಮನೆ, ಕಾಟಕೇರಿ, ಮದೆನಾಡು ಹಾಗೂ ಜೋಡುಪಾಲ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಪ್ರದೇಶದಲ್ಲಿ ಒಂದು ಜೀಪ್, ಪಿಕ್‍ಅಪ್ ಜೀಪ್ ಹಾಗೂ ಕಾರೊಂದು ಕೆಸರಿನಲ್ಲಿ ಹುದುಗಿ ಹೋಗಿರುವ ದೃಶ್ಯ ಕಂಡು ಬಂದಿದೆ. ಅನೇಕ ಮನೆಗಳು ಕುಸಿದ ಗುಡ್ಡಗಳ ಮಣ್ಣಿನಡಿ ಸಿಲುಕಿಕೊಂಡಿವೆ. ಬೃಹತ್ ಮರಗಳು ಎತ್ತರದ ಪ್ರದೇಶದಿಂದ ಉರುಳಿ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದು, ಇದು ಮಹಾಮಳೆಯ ದಾಳಿಯ ಭೀಕರತೆಗೆ ಸಾಕ್ಷಿಯಾಗಿದೆ. 

ಹಾನಿಗೊಳಗಾಗದ ಮಕ್ಕಂದೂರು ಹಾಗೂ ಹೆಮ್ಮೆತಾಳು ಗ್ರಾಮಕ್ಕೆ ರಾಜ್ಯಸಭೆಯ ಮಾಜಿ ಸದಸ್ಯೆ ಪ್ರೇಮಕಾರ್ಯಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಕಳ್ಳತನದ ಬಗ್ಗೆ ಮುಂಜಾಗೃತೆ
ಮಳೆಹಾನಿಯಿಂದ ಅಪಾಯದಂಚಿನ ಮನೆಗಳನ್ನು ಅನೇಕರು ತೊರೆದಿದ್ದು, ಈ ರೀತಿಯ ನಿರ್ಜನ ಪ್ರದೇಶಗಳಿಗೆ ಚೋರರು ಲಗ್ಗೆ ಇಟ್ಟು ಕಳ್ಳತನದಲ್ಲಿ ತೊಡಗಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇಂದು ಡಿಸಿಐಬಿ ತಂಡ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತ್ತು. 

ಉಳಿದಂತೆ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಯಾವುದೇ ಕೊರತೆಗಳು ಉಂಟಾಗದಂತೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಕ್ರಮ ಕೈಗೊಂಡಿದ್ದಾರೆ. ಶನಿವಾರ ಮಣ್ಣಿನಡಿ ಸಿಲುಕಿದ್ದ ಮೂರು ಮೃತ ದೇಹಗಳನ್ನು ಹೊರ ತೆಗೆಯಲಾಗಿತ್ತು. ಆದರೆ ಇಂದು ಯಾವುದೇ ಶವಗಳು ದೊರೆತ್ತಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News