ಬಿಜೆಪಿಯವರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವಿರೋಧಿಗಳು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು,ಆ.26: ಬಿಜೆಪಿಯವರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವಿರೋಧಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಲ್ಲದವರು ಬಿಜೆಪಿಯವರು ಅವರಿಗೆ ಸಾಮಾಜಿ ನ್ಯಾಯದ ಬಗ್ಗೆ ನಂಬಿಕೆ ಇಲ್ಲ ಹಾಗಾಗಿ ಅವರು ಮೀಸಲಾತಿಯನ್ನು ವಿರೋಧಿಸುತ್ತಾರೆ ಎಂದು ಹರಿಹಾಯ್ದರು.
ಸಮಾಜದ ಎಲ್ಲಾ ವರ್ಗಗಳಿಗೆ ಸ್ಥಾನಮಾನ ಸಿಗಬೇಕೆಂದುಬು ಕಾಂಗ್ರೆಸ್ ಪಕ್ಷದ ಆಶಯ ಮತ್ತು ನಂಬಿಕೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿಯವರು 73, 74ನೇ ತಿದ್ದುಪಡಿ ತರುವ ಮೂಲಕ ಸಾಮಾಜಿ ನ್ಯಾಯವನ್ನು ಎತ್ತಿ ಹಿಡಿದರು. ಹಾಗಾಗಿ ಮಹಿಳೆಯರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಿತು. ಇನ್ನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೂ ಮೀಸಲಾತಿ ದೊರೆತ ಹಿನ್ನಲೆಯಲ್ಲಿ ದಲಿತರು ಅಧ್ಯಕ್ಷ ಸ್ಥಾನವನ್ನು ಪಡೆಯುವಂತಾಯಿತು. ಆದರೆ ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯದೀಶ ಮತ್ತು ರಾಜ್ಯಸಭಾ ಸದಸ್ಯರಾಗಿದ್ದ ರಾಮಾಜೋಯಿಸ್ ಅವರು ಇದನ್ನು ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿ ವಾದಕೂಡ ಮಂಡಿಸಿದ್ದರು. ಆ ಸಮಯದಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಆಗಲಿ ಅನಂತಕುಮಾರ್ ಆಗಲಿ ಏಕೆ ಇದನ್ನು ರದ್ಧುಪಡಿಸಬೇಕು ಎಂದು ರಾಮಾಜೋಯಿಸ್ ಅವರನ್ನು ಪ್ರಶ್ನಿಸಲಿಲ್ಲ. ಹೀಗಿದ್ದ ಮೇಲೆ ಇವರು ಮೀಸಲಾತಿ ವಿರೋಧಿಗಳಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತೆಕ್ಕೆಗೆ ಮೈಸೂರು ಮಹಾನಗರ ಪಾಲಿಕೆ: ಮೈಸೂರು ನಗರ ಏನಾದರು ಅಭಿವೃದ್ಧಿಯಾಗಿದ್ದರೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಹಾಗಾಗಿ ಮೈಸೂರಿನ ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಮೈಸೂರು ಅಭಿವೃದ್ಧಿಗೆ ಕೇವಲ 50 ಕೋಟಿ ರೂ. ಮಾತ್ರ ನೀಡಿದ್ದರು. ನಾನು ಮುಖ್ಯಮಂತ್ರಿ ಆದ ಮೇಲೆ 2452 ಕೋಟಿ. ರೂ. ನೀಡುವ ಮೂಲಕ ಹಲವಾರು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಮೈಸೂರು ಜಿಲ್ಲಾ ಸಂಕೀರ್ಣ, ಟ್ರಾಮ ಸೆಂಟರ್, ಅಂಬೇಡ್ಕರ್ ಭವನ, ಜಯದೇವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಮಹರಾಣಿ ಕಾಲೇಜು ಕಟ್ಟಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನು ರಸ್ತೆಗಳ ಅಭಿವೃದ್ಧಿ, ಸ್ವಚ್ಚತೆ ನನ್ನ ಅವಧಿಯಲ್ಲೆ ಆಗಿದ್ದು, ಮೈಸೂರು ಪಾರಂಪರಿಕ ನಗರ ಮತ್ತು ಸ್ವಚ್ಛನಗರಿ ಎಂಬ ಬಿರುದನ್ನು ಪಡೆದದ್ದು ನನ್ನ ಅವಧಿಯಲ್ಲೇ ಹಾಗಾಗಿ ಈ ಬಾರಿ ಮೈಸೂರಿನ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಅವಕಾಶ ಮಾಡಿಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಸಿದ್ದರಾಮಯ್ಯ
ರಾಜ್ಯದಲ್ಲಿ ನಡೆಯುತ್ತಿರುವ ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಯವರು ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಸುಳ್ಳು ಹೇಳಿದ್ದರಿಂದ ಸ್ವಲ್ಪ ನಮಗೆ ಹಿನ್ನಡೆಯಾಯಿತು. ಆದರೆ ಜನರಿಗೆ ಇವರ ಮೋಸ ಅರಿವಾಗಿದೆ. ನಾನು ಹೋದ ಕಡೆಗಳಲೆಲ್ಲಾ ಜನರ ಮಾತುಗಳನ್ನು ಆಲಿಸಿದ್ದೇನೆ. ಹಾಗಾಗಿ ಈ ಬಾರಿ ಬಿಜೆಪಿಯವರ ಆಟ ನಡೆಯುವುದಿಲ್ಲ ಎಂದು ಹೇಳಿದರು.
ಮೈಸೂರು ನಗರ ಮತ್ತು ಇಲ್ಲಿನ ಜನರ ನಾಡಿಮಿಡಿತ ಈಶ್ವರಪ್ಪನಿಗೆ ಏನು ಗೊತ್ತು ಎಂದು ಸಿದ್ದರಾಮಯ್ಯ ಗರಂ ಆದರು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ನವರು ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಅತಂತ್ರ ಎಂಬ ಪ್ರಶ್ನೆಯೇ ಇಲ್ಲ, ಏನಿದ್ದರು ತಂತ್ರವೇ ನಾನು ಮೈಸೂರಿನಲ್ಲೇ ಹುಟ್ಟಿ ಬೆಳೆದು ಇಲ್ಲಿನ ಜನರ ಮನಸ್ಥಿತಿ ಏನೆಂದು ಅರಿತಿದ್ದೇನೆ. ಇನ್ನೂ ಈಶ್ವರಪ್ಪನಿಗೆ ಮೈಸೂರಿನ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದರು.