×
Ad

ಕೇಶವಮೂರ್ತಿ ಮಂಡ್ಯ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಿದ್ದರು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-08-26 21:09 IST

ಮಂಡ್ಯ, ಆ.26: ವಿಚಾರವಾದಿ, ಲೇಖಕ, ಚಿಂತಕ ಪ್ರೊ.ಎಚ್.ಎಲ್.ಕೇಶವಮೂರ್ತಿ ಮಂಡ್ಯ ಜಿಲ್ಲೆಯ ಸಾಕ್ಷಿಪ್ರಜ್ಞೆಯಾಗಿದ್ದರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನ ಉದ್ಘಾಟಿಸಿ ಅವರು ಮಾತನಾಡಿದರು.

ಕೇಶವಮೂರ್ತಿ ಮಂಡ್ಯ ಜಿಲ್ಲೆಯಲ್ಲಿನ ಪ್ರಗತಿಪರ ಹೋರಾಟ, ಭಾಷೆ, ರಾಜಕೀಯ, ಸಾಮಾಜಿಕ, ಸಮಾನತೆಯ ಸಾಕ್ಷಿಪ್ರಜ್ಞೆಯ ಸಂಕೇತವಾಗಿದ್ದರು. ಆದರೆ, ಅಂಥಹ ಪ್ರಜ್ಞೆ ಇಲ್ಲದಂತಾಗಿದೆ ಎಂದು ಅವರು ವಿಷಾದಿಸಿದರು.

ಸ್ವಜಾತಿ ವಿರುದ್ಧವೇ ನಿಷ್ಠುರವಾಗಿ ತಪ್ಪುಗಳನ್ನು ಎತ್ತಿತೋರಿಸುವ ಧೈರ್ಯ ಪ್ರದರ್ಶಿಸಿದ್ದರು. ಹೋರಾಟಗಳು ದಾರಿ ತಪ್ಪಿದಾಗ ಸರಿದಾರಿಯತ್ತ ಕೊಂಡೊಯ್ಯುತ್ತಿದ್ದರು. ಕುವೆಂಪು ಹಾದಿಯಲ್ಲಿಯೇ ಎಚ್.ಎಲ್.ಕೇಶವಮೂರ್ತಿಯವರು ಸಾಗಿದರು ಎಂದು ಅವರು ಸ್ಮರಿಸಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಕೇಶವಮೂರ್ತಿ ಅವರು ಯಾರೂ ಅಳಿಸಲಾಗದ ಹಾಸ್ಯವನ್ನು ಸೃಷ್ಟಿಸಿದರು. ಹಾಸ್ಯ ಬರಹದ ಮೂಲಕವೇ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತಿದ್ದರು, ಭ್ರಷ್ಟ ರಾಜಕಾರಣಿಗಳನ್ನು ಚುಚ್ಚುತ್ತಿದ್ದರು ಎಂದು ಅವರು ವಿಶ್ಲೇಷಿಸಿದರು.

ಇಂದು ಯುವಜನರನ್ನು ದೇಶದ್ರೋಹ, ಸಮಾಜಘಾತುಕ ಕೃತ್ಯಗಳತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ಕೇಶವಮೂರ್ತಿ ಪ್ರತಿಷ್ಠಾನವು ದಾರಿತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಬೇಕು. ಸಂಶೋಧನಾ ಕೇಂದ್ರವಾಗಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಪ್ರೊ.ವಿ.ಎಸ್.ಶ್ರೀಧರ್ ಅವರು ಮೌಢ್ಯ ಪ್ರತಿಬಂಧಕ ಕಾಯ್ದೆಯ ಆಗುಹೋಗುಗಳು ಕುರಿತು ಹಾಗೂ ಮೈಸೂರಿನ ಪ್ರೊ.ಲತಾ ಅವರು ಸರಕಾರಿ ಕಚೇರಿಗಳಲ್ಲಿ ಮತೀಯ ಆಚರಣೆಗಳು ಕುರಿತು ವಿಚಾರ ಮಂಡಿಸಿದರು.

ಅಂಕಣಕಾರ ಬಿ.ಚಂದ್ರೇಗೌಡ, ರೈತ ಹೋರಾಟಗಾರ್ತಿ ಸುನಂದ ಜಯರಾಂ, ಪ್ರೊ.ಹುಲ್ಕೆರೆ ಮಹಾದೇವ, ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಖಜಾಂಚಿ ದೇವಿ, ಗೌರವ ಸಲಹೆಗಾರರಾದ ಜಗದೀಶ್‍ಕೊಪ್ಪ, ಕೆ.ಬೋರಯ್ಯ, ಗಾಯಕ ಜನಾರ್ಧನ್(ಜೆನ್ನಿ), ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News