ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ

Update: 2018-08-26 17:19 GMT

ಕಲಬುರ್ಗಿ, ಆ.26: ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಕೊನೆಗೂ ವಿಮಾನಗಳ ಪ್ರಾಯೋಗಿಕ ಹಾರಾಟ ರವಿವಾರ ಆರಂಭವಾಗುವ ಮೂಲಕ ಜಿಲ್ಲೆಯ ಜನತೆಯ ಬಹು ದಿನಗಳ ಕನಸು ನನಸಾಗಿದೆ. ಹೈದರಾಬಾದ್‌ನಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎರಡು ಚಿಕ್ಕ ವಿಮಾನಗಳನ್ನು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಾವಿರಾರು ಜನ ಸ್ವಾಗತಿಸಿದರು.

ಕಲಬುರ್ಗಿ ತಾಲೂಕಿನ ಶ್ರೀನಿವಾಸ ಸರಡಗಿ ಬಳಿ 175.57 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡ ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇಂದು ಪ್ರಾಯೋಗಿಕವಾಗಿ ವಿಮಾನಗಳ ಹಾರಾಟವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸರಕಾರವೇ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇನ್ನೇನಿದ್ದರೂ ಕೇಂದ್ರ ಸರಕಾರದ ಜವಾಬ್ದಾರಿ. ಉಡಾನ್ ಯೋಜನೆಯಡಿ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ಪ್ರದೇಶವಾಗಿರುವ ಕಲಬುರ್ಗಿಯಲ್ಲಿ ಸ್ಥಾಪಿಸಿರುವ ವಿಮಾನ ನಿಲ್ದಾಣಕ್ಕೆ ವಿಶೇಷ ಗಮನ ಹರಿಸಬೇಕು. ಇಂಡಿಯನ್ ಏರ್‌ಲೈನ್ಸ್ ಸೇವೆಯನ್ನು ಆರಂಭಿಸುವ ಮೂಲಕ ಈ ಭಾಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಉಡಾನ್ ಮೂರನೇ ಹಂತದ ಯೋಜನೆಯಲ್ಲಿ ಕಲಬುರ್ಗಿ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ವಾಣಿಜ್ಯ ಉದ್ದೇಶದ ವಿಮಾನಗಳ ಹಾರಾಟದ ಆರಂಭವು ವಿಳಂಬವಾಗುವ ಸಾಧ್ಯತೆಗಳಿರುವುದರಿಂದ ಅಲ್ಲಿಯವರೆಗೂ ಇಲ್ಲಿ ವಿಮಾನ ತರಬೇತಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಹೈದರಾಬಾದ್ ಮೂಲದ ಏಷ್ಯಾ ಫೆಸಿಫಿಕ್ ತರಬೇತಿ ಕೇಂದ್ರ, ಏವಿಕಾನ್ ಸಂಸ್ಥೆಗಳು ವಿಮಾನ ತರಬೇತಿ ನೀಡಲು ಮುಂದೆ ಬಂದಿವೆ. ರನ್ ವೇ ಹಾಳಾಗಬಾರದೆಂದು ತರಬೇತಿಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಸಂದರ್ಭದಲ್ಲಿ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News