1924ರಲ್ಲಿ ಕೇರಳದಲ್ಲಿ ನೆರೆ ಸಂತ್ರಸ್ತರಿಗಾಗಿ ಮಹಾತ್ಮ ಗಾಂಧಿ 6 ಸಾವಿರ ರೂ. ಸಂಗ್ರಹಿಸಿದ್ದರು

Update: 2018-08-27 05:29 GMT

ತಿರುವನಂತಪುರ, ಆ.27: ಸರಿಸುಮಾರು 94 ವರ್ಷಗಳ ಹಿಂದೆ ಕೇರಳ ಮೊದಲ ಬಾರಿ ಮಹಾ ಪ್ರಳಯದಿಂದ ತತ್ತರಿಸಿತ್ತು. ಆಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಂತ್ರಸ್ತರ ನೆರವಿಗಾಗಿ 6 ಸಾವಿರ ರೂಪಾಯಿ ಸಂಗ್ರಹಿಸಿದ್ದರು.

ಮಹಾತ್ಮ ಗಾಂಧಿ ಅವರು ‘ಯಂಗ್ ಇಂಡಿಯಾ’ ಮತ್ತು ನವಜೀವನ್’ ಪತ್ರಿಕೆಗಳಲ್ಲಿ  ಸರಣಿ ಲೇಖನಗಳನ್ನು ಪ್ರಕಟಿಸಿ ಪ್ರವಾಹ ಪೀಡಿತ ಮಲಬಾರ್  ಪ್ರಾಂತ್ಯದ(ಕೇರಳ) ಜನತೆಗೆ  ನೆರವಾಗುವಂತೆ ಮನವಿ ಮಾಡಿದ್ದರು ಎಂಬ ವಿಚಾರ ದಾಖಲೆಗಳಿಂದ ತಿಳಿದು ಬಂದಿದೆ.

ಗಾಂಧೀಜಿವರ ಮನವಿಗೆ ಸ್ಪಂದಿಸಿದ ದೇಶದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ತಮ್ಮಿಂದ ಸಾಧ್ಯವಿರುವ ಸಹಾಯ ನೀಡಿದ್ದರು. ಹಲವರು ಚಿನ್ನಾಭರಣಗಳನ್ನು ನೀಡಿದ್ದರು.

ಹಲವು ಮಂದಿ ದಿನದ ಊಟ , ಹಾಲು ಕುಡಿಯುವುದನ್ನು ತ್ಯಜಿಸಿ ಸಂತ್ರಸ್ತರಿಗೆ ನೆರವಾಗಿದ್ದರು.

ಬಾಲಕಿಯೊಬ್ಬಳು ದೇಣಿಗೆ ನೀಡಲು ಐದು ಪೈಸೆ ಕದ್ದಿರುವುದನ್ನು  ಮಹಾತ್ಮ ಗಾಂಧಿ ಅವರು ಯಂಗ್ ಇಂಡಿಯಾದಲ್ಲಿ ಬರೆದಿರುವ ತಮ್ಮ ಲೇಖನವೊಂದರಲ್ಲಿ ತಿಳಿಸಿದ್ದಾರೆ.

1924ರಲ್ಲಿ ಸತತ  ಮೂರು ವಾರಗಳ ಕಾಲ ಸುರಿದ ಸತತ ಮಳೆಯಿಂದಾಗಿ  ಕೇರಳದ ಮುನ್ನಾರ್, ತ್ರಿಶೂರ್ , ಕೋಝಿಕ್ಕೊಡ್, ಎರ್ನಾಕುಲಂ, ಅಲುವಾ, ಮುವಾಟ್ಟುಪುಝ, ಕುಮಾರಕೊಮ್, ಚೆಂಗನ್ನೂರು ಮತ್ತು ತಿರುವನಂತಪುರ ಜಲಾವೃತಗೊಂಡು ಜನರು  ತೊಂದರೆಗೊಳಗಾಗಿದ್ದರು.

ಕೆಲವು ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಪ್ರಳಯದಿಂದಾಗಿ 14 ಜಿಲ್ಲೆಗಳಲ್ಲಿ 387 ಮಂದಿ ಬಲಿಯಾಗಿದ್ದಾರೆ. 54.1 ಲಕ್ಷ ಜನರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  20 ಸಾವಿರ ಕೋಟಿ ರೂ. ನಷ್ಟ ಸಂಭವಿಸಿವೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News