×
Ad

"ಬಿಜೆಪಿಯಿಂದ ರೌಡಿಗಳು, ಮಾಫಿಯಾದವರು, ಬಡ್ಡಿ ದಂಧೆಕೋರರಿಗೆ ಟಿಕೆಟ್"

Update: 2018-08-27 20:11 IST

ತುಮಕೂರು,ಆ.27: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಗೆ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಮಾಜಿ ಸಂಸದರು ಟಿಕೆಟ್ ಮಾರಿಕೊಂಡಿದ್ದಾರೆಂಬ ಆರೋಪಗಳು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದ್ದು, ಜೈಲಿಗೆ ಹೋದವರಿಗೆ, ಮಾಫಿಯಾದವರಿಗೆ, ಬಡ್ಡಿ ದಂಧೆಕೋರರಿಗೆ ಟಿಕೆಟ್ ಹಂಚಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಹಾನಗರಪಾಲಿಕೆಗೆ ಆ.31ರಂದು ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಇನ್ನು ಮೂರೆ ದಿನ ಬಾಕಿ ಉಳಿದಿರುವಂತೆಯೇ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಪ್ಪ ಮಗ ಸೇರಿ ಬಿಜೆಪಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.

ಬಿಜೆಪಿ ಮೂಲ ಕಾರ್ಯಕರ್ತರು ಕಳೆದ ವಿಧಾನಸಭೆಯಲ್ಲಿ ಅನುಭವಿಸಿದಂತಹ ನೋವನ್ನು ಈಗ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡರಷ್ಟು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರು, ಮಾಜಿ ಸಂಸದರೇ ಕಾರಣ ಎಂದು ಆಪಾದಿಸಿದರು.

ಅವನತಿಯತ್ತ ಬಿಜೆಪಿ: ಜಿಲ್ಲೆಯಲ್ಲಿ ಬಿಜೆಪಿ ಅವನತಿಯತ್ತ ಸಾಗುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ, ಗುಬ್ಬಿ ಮತ್ತಿತರೆ ಕ್ಷೇತ್ರಗಳಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದೊದಗಿದೆ. ಇನ್ನು ಬಿಜೆಪಿ ಗೆದ್ದಿರುವ  ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಪ್ರತ್ಯೇಕ ಜಿಲ್ಲೆಗಳಂತಾಗಿವೆ. ಜೊತೆಗೆ ತುಮಕೂರು ಒಂದು ದ್ವೀಪದಂತಾಗಿದೆ. ಈ ರೀತಿಯಾಗಿ ಹೊಂದಾಣಿಕೆಯೇ ಇಲ್ಲದಂತೆ ಬಿಜೆಪಿ ಅವನತಿಯತ್ತ ಸಾಗುತ್ತಿದ್ದು, ಕೂಡಲೇ ಪಕ್ಷದ ರಾಜ್ಯಾಧ್ಯಕ್ಷರು ಇತ್ತ ಗಮನ ಹರಿಸಿ ಪಕ್ಷವನ್ನು ಬಲಪಡಿಸಲು ಕ್ರಮ ವಹಿಸಿ ಕಾರ್ಯಕರ್ತರ ಜೊತೆ ಹಾಗೂ ನಾಗರಿಕರ ಜೊತೆ ಪ್ರೀತಿ ವಿಶ್ವಾಸ ತೋರುವಂತಹ ವ್ಯಕ್ತಿಗಳಿಗೆ ಜವಾಬ್ದಾರಿ ವಹಿಸಿ ಎಂದು ಸಲಹೆ ನೀಡಿದರು.

ಸಜ್ಜನರಿಗೆ ಮತ ನೀಡಿ: ಆ.31 ರಂದು ನಡೆಯಲಿರುವ ಮಹಾನಗರಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಸ್ಪರ್ಧಿಸಿರಲಿ ಮಾಫಿಯಾದವರಿಗೆ, ಬಡ್ಡಿ ದಂಧೆಕೋರರಿಗೆ, ಜೈಲಿಗೆ ಹೋದವರಿಗೆ ಮತ ನೀಡದೆ ಒಳ್ಳೆಯ ಸಜ್ಜನರಿಗೆ ಮಾತ್ರ ಮತ ನೀಡಿ ನಗರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಅಂದು ಅಟಲ್ ಬಿಹಾರಿ ವಾಜಪೇಯಿ ಅವರ ಸೋಲಿಗೆ ಕಾರಣರಾಗಿ ಅಂದಿನ ಕಾಂಗ್ರೆಸ್‍ನಲ್ಲಿದ್ದ ಮಾಜಿ ಸಂಸದರು ಇಂದು ವಾಜಪೇಯಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದು, ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯ ಸಚಿವರ ವರ್ತನೆ ಸರಿಯಿರಲಿ: ರಾಜ್ಯ ಸಚಿವ ಮಹೇಶ್ ಅವರಿಗೆ ಇತ್ತೀಚೆಗೆ ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರ ಜೊತೆ ಯಾವ ರೀತಿ ವರ್ತಿಸಬೇಕೆಂಬ ಅರಿವು ಇರಬೇಕು. ಇದನ್ನು ಮೊದಲು ಕಲಿಯಲಿ ಎಂದು ನಿರ್ಮಲ ಸೀತಾರಾಮನ್ ಅವರನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಜಯಸಿಂಹರಾವ್, ಶಾಂತರಾಜು, ಬನಶಂಕರಿಬಾಬು, ಎಂ.ಎಸ್. ಚಂದ್ರಶೇಖರ್, ಉಮೇಶ್, ಜಿ.ಗಣೇಶ್, ಕೆ.ಹರೀಶ್, ಮದನ್‍ಸಿಂಗ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News