ಸಮ್ಮಿಶ್ರ ಸರಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ: ದಿನೇಶ್‌ ಗುಂಡೂರಾವ್

Update: 2018-08-27 14:50 GMT

ಹುಬ್ಬಳ್ಳಿ, ಆ.27: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಪ್ರತಿಪಕ್ಷ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ನಾಯಕರಿಗೆ ಬಿಜೆಪಿಯವರು ಬೆದರಿಕೆ ಹಾಕುತ್ತಿದ್ದಾರೆ. ಆದುದರಿಂದ, ದುಷ್ಟ ಶಕ್ತಿಗಳ ವಿರುದ್ಧ ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದರು.

ಬಿಜೆಪಿಯಲ್ಲಿ ಯಾರಿಗೂ ಅಧಿಕಾರ ಇಲ್ಲ. ಎಲ್ಲವನ್ನೂ ಪ್ರಧಾನಿ ನರೇಂದ್ರಮೋದಿ ನೋಡಿಕೊಳ್ಳುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮುನ್ನ ನಾವು ಪಕ್ಷವನ್ನು ಬಲಪಡಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದು, ಸರಕಾರದ ಸಮನ್ವಯತೆ ಕಾಪಾಡುತ್ತಿದ್ದಾರೆ. ಜನರ ಒತ್ತಾಯದಿಂದಾಗಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪಕ್ಷದ ಸರಕಾರವು ಕಳೆದ ಐದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದೆ. ಸ್ಥಳೀಯ ಚುನಾವಣೆಗಳ ಪ್ರಚಾರಕ್ಕೆ ನಾಳೆ ಅಂತಿಮ ದಿನವಾಗಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ತನಗಿದೆ ಎಂದು ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕುರಿತು ಸಂಸದ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಖಂಡನೀಯ. ದೇಶದಲ್ಲಿ ವಿಚಾರವಾದಿಗಳ ಕೊಲೆಯಾಗುತ್ತಿದೆ. ಬಲಪಂಥೀಯರ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲಾಗುತ್ತಿದೆ. ಕೆಲವು ಪ್ರಕರಣಗಳನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

ಉತ್ತರ ಕನ್ನಡ ಜಿಲ್ಲೆಯ ಯುವಕ ಪರೇಶ್ ಮೆಸ್ತ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಆದರೆ, ಸಿಬಿಐ ವಿಚಾರಣೆಯನ್ನೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ವೌನವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಬಿಡುಗಡೆಯಾಗಬೇಕಿರುವ 150 ಕೋಟಿ ರೂ.ಪಿಂಚಣಿ ಹಣದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ದಿನೇಶ್‌ಗುಂಡೂರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News