ಕೊಡಗು ನೆರೆ ಸಂತ್ರಸ್ತರಿಗೆ ಮುರುಘಾ ಶ್ರೀ ಸಾಂತ್ವನ: ನಿರಾಶ್ರಿತರ ಮಕ್ಕಳಿಗೆ ಶಿಕ್ಷಣದ ಅಭಯ

Update: 2018-08-27 16:21 GMT

ಮಡಿಕೇರಿ, ಆ.27: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸೋಮವಾರಪೇಟೆ ತಾಲೂಕಿನ ಬೇಳೂರಿನಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ವಯೋವೃದ್ಧರಿಗೆ ವೃದ್ಧಾಶ್ರಮದಲ್ಲಿ ಆಶ್ರಯ ನೀಡಲು ಸಿದ್ಧವಿರುವುದಾಗಿ ಚಿತ್ರದುರ್ಗದ ಶ್ರೀ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿಗಳು ಭರವಸೆ ನೀಡಿದ್ದಾರೆ.

ಸೋಮವಾರ ಮಡಿಕೇರಿಯ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿರುವ ಸೇವಾಭಾರತಿಯ ಪುನರ್ವಸತಿ ಕೇಂದ್ರ ಹಾಗೂ ಪೊಲೀಸ್ ಸಮುದಾಯ ಭವನ ಮೈತ್ರಿಯ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಸ್ವಾಮೀಜಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ಮಕ್ಕಳಿಗೆ ಜ್ಯೂಸ್ ಮತ್ತು ಬಿಸ್ಕೆಟ್‍ಗಳನ್ನು ವಿತರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡು ನಿರಾಶ್ರಿತವಾಗಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕೊಡಗಿನಲ್ಲಿ ಇಂತಹ ದುರಂತ ಸಂಭವಿಸಿರುವುದು ದುಃಖದ ವಿಚಾರವೆಂದು ವಿಷಾದಿಸಿದರು.

ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಕುಟುಂಬದ ಮಕ್ಕಳಿಗೆ ಅವಶ್ಯವಿದ್ದಲ್ಲಿ ಜಿಲ್ಲೆಯಲ್ಲೆ ಇರುವ ಮಠದ ಶಾಖೆಗಳ ಮೂಲಕ ಅಗತ್ಯ ಶಿಕ್ಷಣ ಒದಗಿಸಲಾಗುವುದು. ಇದರೊಂದಿಗೆ ಮನೆ ಕಳೆದುಕೊಂಡಿರುವವರ ವಯೋವೃದ್ಧರಿಗೆ ಮಠದ ವೃದ್ಧಾಶ್ರಮದಲ್ಲಿ ಆಶ್ರಯವನ್ನು ಕಲ್ಪಿಸಲಾಗುವುದು ಎಂದರು. ನಿರಾಶ್ರಿತರು ಯಾವುದೇ ಸಂದರ್ಭದಲ್ಲಿ ಬೇಳೂರು ಮಠವನ್ನು ಸಂಪರ್ಕಿಸಬಹುದೆಂದರು. ಅತಿವೃಷ್ಟಿಯಿಂದ ಹಾನಿಗೀಡಾದ ಗ್ರಾಮಗಳನ್ನು ಮಠದ ವತಿಯಿಂದ ದತ್ತು ಪಡೆದು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದು ಸ್ವಾಮೀಜಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಠದ ವ್ಯವಸ್ಥಾಪಕ ಶಶಿ ಕುಮಾರ್, ಶರಣ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಎಸ್.ಮಹೇಶ್, ಸೇವಾ ಭಾರತಿಯ ಕಾರ್ಯದರ್ಶಿ ಕೆ.ಕೆ.ಮಹೇಶ್ ಕುಮಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಬಳಿಕ ಸ್ವಾಮೀಜಿಗಳು ಭೂ ಕುಸಿತಕ್ಕೆ ಒಳಗಾದ ಮಕ್ಕಂದೂರು, ಮಾದಾಪುರ, ಸುಂಟಿಕೊಪ್ಪದಲ್ಲಿರುವ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News