ಪ್ರಕೃತಿ ವಿಕೋಪದಿಂದ ದೇಶದ ಕಾಫಿ ಉದ್ಯಮಕ್ಕೆ ಭಾರೀ ಪೆಟ್ಟು: ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ

Update: 2018-08-27 16:39 GMT

ಮಡಿಕೇರಿ, ಆ.27: ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ದೇಶದ ಕಾಫಿ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಇದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ ಹೇಳಿದ್ದಾರೆ.

ಪ್ರಕೃತಿ ವಿಕೋಪದಿಂದ ಕಾಫಿ ತೋಟಗಳು ನಾಶವಾಗಿರುವ ಕೊಡಗಿನ ವಿವಿಧ ಪ್ರದೇಶಗಳಿಗೆ ಕಾಫಿ ಬೆಳೆಗಾರರ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಫಿ ಉದ್ಯಮದ ಇತಿಹಾಸದಲ್ಲಿ ಇಂತಹ ದುರಂತವನ್ನು ಕಂಡಿರಲಿಲ್ಲ. ಇದೊಂದು ಭೀಕರ ದುರಂತವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಮಳೆ ಕೊರತೆಯಿಂದ ಕಾಫಿಗೆ ಬೋರರ್ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದ್ದವು. ಆದರೆ ಈ ಬಾರೀ ವಿಪರೀತ ಮಳೆಯಿಂದಾಗಿ ಊಹಿಸಲಸಾಧ್ಯವಾದ ಅನಾಹುತ ಸಂಭವಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಕೇರಳದಲ್ಲಿಯೂ ಕಾಫಿ ಕೃಷಿಗೆ ಭಾರೀ ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಲು ಕಾಫಿ ಮಂಡಳಿಯ ಅಧಿಕಾರಿಗಳ ತಂಡ ವಿವಿಧೆಡೆಗಳಿಗೆ ತೆರಳಿ ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು.

ಈ ಬಾರಿ ಕಾಫಿ ಫಸಲಿಗೆ ಹಾನಿಯಾಗಿರುವುದು ಮಾತ್ರವಲ್ಲದೆ ಕೊಡಗಿನಲ್ಲಿ ಭೂಕುಸಿತದಿಂದಾಗಿ ಆಗಿರುವ ನಷ್ಟವನ್ನು ಪ್ರತ್ಯೇಕವಾಗಿ ಅಂದಾಜಿಸಬೇಕಿದೆ. ಪ್ರಾಥಮಿಕ ವರದಿ ತರಿಸಿಕೊಂಡ ನಂತರ ಶೀಘ್ರದಲ್ಲೇ ಕಾಫಿ ಬೆಳೆಯುವ ಪ್ರದೇಶಗಳ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಇನ್ನಿತರ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದು ಅವರು ನುಡಿದರು.

ಈ ಸಭೆಯಲ್ಲಿ ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದು, ಸಭೆಯಲ್ಲಿ ಕಾಫಿ ಬೆಳೆ ಹಾಗೂ ತೋಟಗಳಿಗೆ ಆಗಿರುವ ಹಾನಿಯ ಕುರಿತು ಸಮಗ್ರ ಚರ್ಚೆ ನಡೆಸಿ ತುರ್ತಾಗಿ ಹೇಗೆ ಪರಿಹಾರ ಕಂಡುಕೊಳ್ಳಬಹುದೆಂದು ತೀರ್ಮಾನಿಸಿ ನಂತರ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು.   

ಈ ಸಂದರ್ಭ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಟಿ.ಪ್ರಮೋದ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಾರ್ಯಪ್ಪ, ಕರ್ನಾಟಕ ಗ್ರೋವರಸ್ ಫೆಡರೇಷನ್‍ನ ಪ್ರಮುಖರಾದ ವಿಶ್ವನಾಥ್, ನಂದಾ ಬೆಳ್ಯಪ್ಪ, ಉದಯ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News