×
Ad

​ಕಾಫಿ ಬೆಳೆಗಾರರ ಸಾಲ ಮನ್ನಾಕ್ಕೆ ಬೆಳೆಗಾರರ ಸಂಘಟನೆಗಳ ಆಗ್ರಹ

Update: 2018-08-27 22:10 IST

ಮಡಿಕೇರಿ, ಆ.27: ಮಹಾಮಳೆ ಹಾಗೂ ಭೂಕುಸಿತದಿಂದಾಗಿ ಕಾಫಿ ಬೆಳೆಗಾರರು ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದು, ಅವರ ಸಾಲವನ್ನು ಮನ್ನಾ ಮಾಡುವಂತೆ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಎಚ್.ಟಿ.ಪ್ರಮೋದ್  ಒತ್ತಾಯಿಸಿದ್ದಾರೆ.

ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ ಅವರು ಕೊಡಗಿಗೆ ಆಗಮಿಸಿದ್ದ ಸಂದರ್ಭ ಈ ಕುರಿತು ಮನವಿ ಸಲ್ಲಿಸಿದ ಅವರು, ದೇಶದಲ್ಲಿ ಕಾಫಿ ಉದ್ಯಮ ಬೃಹತ್ ಉದ್ಯಮವಾಗಿದ್ದು, ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡಿದೆ. ಕಾಫಿಯಿಂದಾಗಿ ಸಾಕಷ್ಟು ಆದಾಯ ವಿವಿಧ ರೂಪದಲ್ಲಿ ಬರುತ್ತಿದೆ. ಆದರೆ, ಈ ಬಾರಿ ಕಾಫಿ ಬೆಳೆಗಾರರು ಸಾಕಷ್ಟು ಸಂಕಷ್ಟದಲ್ಲಿದ್ದು, ಮಾರ್ಚ್ 31ರ ತನಕ ಇದ್ದ ಸುಮಾರು 6 ಸಾವಿರ ಕೋಟಿ ರೂ.ಗಳ ಸಾಲದ ಮೇಲಿನ ಸುಮಾರು 1,200 ಕೋಟಿ ರೂ. ಬಡ್ಡಿ ಮನ್ನಾ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಇದೀಗ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅದಕ್ಕೂ ಮಿಗಿಲಾದ ದುರಂತ ನಡೆದಿದ್ದು, ಕೊಡಗು ಜಿಲ್ಲೆಯ ಸುಮಾರು 28 ಗ್ರಾಮಗಳಲ್ಲಿ ಕಾಫಿ ತೋಟಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ಕಾಫಿ ತೋಟಗಳೇ ನಾಶವಾಗಿವೆ. ಕಾಫಿ ತೋಟಗಳಿಲ್ಲದ ಹಿನ್ನೆಲೆಯಲ್ಲಿ ಅಲ್ಲಿನವರಿಗೆ ಸಾಲ ಮರುಪಾವತಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ  ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. 

ಕರ್ನಾಟಕ ಗ್ರೋವರಸ್ ಫೆಡರೇಷನ್‍ನ ಪ್ರಮುಖರಾದ ನಂದ ಬೆಳ್ಯಪ್ಪ ಮಾತನಾಡಿ, ಹಾರಂಗಿ ಜಲಾಶಯದಲ್ಲಿ ಬಹುದಿನಗಳ ಕಾಲ ಭರ್ತಿಯಾಗಿ ನೀರು ಸಂಗ್ರಹಿಸಿಟ್ಟಿದ್ದೇ ಆ ವಿಭಾಗದ ದುರಂತಕ್ಕೆ ಕಾರಣ ಎಂದು ಆರೋಪಿಸಿದರು.

ಮಳೆಯ ಅಂದಾಜು ಮಾಡಲಾಗದ ಅಧಿಕಾರಿಗಳು ಜಲಾಶಯದಲ್ಲಿ ನೀರು ತುಂಬಿಸಿದ್ದ ಹಿನ್ನೆಲೆಯಲ್ಲಿ ಭೂಕುಸಿತವಾಗಿದೆ. ಅಲ್ಲದೆ ಜಲಾಶಯದಿಂದ ಒಮ್ಮೆಲೆ ನೀರು ಬಿಟ್ಟದ್ದು ಮಣ್ಣು ಜಾರಲು ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟವರೇ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ ದೂರಿದ ಅವರು, ಮಳೆಗಾಲದಲ್ಲಿ   ಕನಿಷ್ಟ 25 ಅಡಿಗಳಷ್ಟಾದರೂ ಜಲಾಶಯವನ್ನು ಖಾಲಿ ಇಡಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News