ತುಮಕೂರು: ಒಂದೇ ರಾತ್ರಿ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು
ತುಮಕೂರು, ಆ.27: ಒಂದೇ ರಾತ್ರಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಇಲ್ಲಿನ ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.
ನಗರದ ಸಿದ್ದರಾಮೇಶ್ವರ ಬಡಾವಣೆಯ 5ನೇ ಮುಖ್ಯರಸ್ತೆಯ ಪಾರ್ಕ್ ಮುಂಭಾಗ ಇರುವ ಮಹೇಶ್ ಪ್ರಾವಿಜನ್ ಸ್ಟೋರ್ ನ ರೋಲಿಂಗ್ ಶಟರ್ ಮೀಟಿ ಒಳ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ 2 ಸಾವಿರ ರೂ. ನಗದು, ಬೀಡಿ, ಸಿಗರೇಟು ಸೇರಿದಂತೆ ಸುಮಾರು ನಾಲ್ಕೈದು ಸಾವಿರ ರೂ. ಬೆಲೆ ಬಾಳು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗೋಕುಲ ಬಡಾವಣೆಯ 2ನೇ ಹಂತದಲ್ಲಿರುವ ಸದಾಶಿವಯ್ಯ ಎಂಬವರ ಬಸವೇಶ್ವರ ಸ್ಟೋರ್ ನ ಶಟರ್ ಮೀಟಿರುವ ಕಳ್ಳರು ಒಳನುಗ್ಗಿ ಎಸ್‍ಇಡಿ ಟಿ.ವಿ., ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ.
ನಂತರ ಇದೇ ಬಡಾವಣೆಯ ರೈಲ್ವೆಗೇಟ್ ಸಮೀಪದ ಜಯರಾಮಯ್ಯ ಎಂಬುವರ ಜೆರಾಕ್ಸ್ ಅಂಗಡಿಗೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆದರೆ ಈ ಅಂಗಡಿಯಲ್ಲಿ ಯಾವುದೇ ರೀತಿಯ ನಗದು, ವಸ್ತುಗಳು ದೊರೆತಿಲ್ಲ ಎನ್ನಲಾಗಿದೆ. ಒಂದೇ ರಾತ್ರಿ ಮೂರು ಕಡೆ ಕಳ್ಳತನವನ್ನು ಒಂದೇ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಒಂದೇ ರಾತ್ರಿ ಮೂರು ಅಂಗಡಿಗಳ ಬಾಗಿಲು ಮೀಟಿರುವ ಕಳ್ಳತನ ನಡೆರುವ ಬಗ್ಗೆ ಈ ಭಾಗದ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕೂಡಲೇ ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸುವ ಮೂಲಕ ಕಳ್ಳರು ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಈ ಮೂರು ಪ್ರಕರಣವನ್ನು ಜಯನಗರ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.