ಹನೂರು: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಹನೂರು,ಆ.27: ಪ್ರತಿ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆ ಇರುತ್ತದೆ. ಆದ್ದರಿಂದ ಶಿಕ್ಷಕರು ಅವರಿಗೆ ಶಾಲೆಯಲ್ಲಿ ವೇದಿಕೆ ಒದಗಿಸುವುದರ ಮೂಲಕ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಪಂ ಸದಸ್ಯ ಬಸವರಾಜು ತಿಳಿಸಿದರು.
ಹನೂರು ಸಮೀಪದ ರಾಮಾಪುರ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯರಲ್ಲಿ ಅಗಾಧವಾದ ಪ್ರತಿಭೆ ಅಡಕವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದಾರೆ. ಆಗಾಗಿ ಪ್ರತಿ ಮಗುವು ತನ್ನದೇಯಾದ ಪ್ರತಿಭೆಯನ್ನು ಹೊಂದಿದ್ದು, ಕೆಲವರು ಸಂಗೀತ, ಆಟ, ಕುಣಿತ, ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಮತ್ತೆ ಕೆಲವರು ಇನ್ನಿತರ ಚಟುವಟಿಕೆಗಳಲ್ಲಿ ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ ಶಾಲೆಯಲ್ಲಿ ಸೂಕ್ತ ಅವಕಾಶ ಸಿಗದ ಪರಿಣಾಮ ಪ್ರತಿಭೆ ಸುಪ್ತವಾಗಿರುತ್ತದೆ. ಈ ದಿಸೆಯಲ್ಲಿ ಸರ್ಕಾರ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿದೆ. ಆದುದರಿಂದ ಶಿಕ್ಷಕರು ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದರ ಮೂಲಕ ಶಾಲೆಯಲ್ಲಿ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಸೇವಾ ಮನೋಭಾವನೆ ರೂಢಿಸಿಕೊಳ್ಳಿ: ಹನೂರು ಶೈಕ್ಷಣಿಕ ವಲಯ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಇದರಲ್ಲಿ ಶಿಕ್ಷಕರ ಶ್ರಮ ಅಪಾರ. ಆದರೆ ವಲಯದ ಸರ್ಕಾರಿ ಶಾಲೆಯ 16ಕ್ಕೂ ಹೆಚ್ಚು ಶಿಕ್ಷಕರು ಸರಿಯಾಗಿ ಶಾಲೆಗೆ ತೆರಳುತ್ತಿಲ್ಲ. ಪರಿಣಾಮ ಮಕ್ಕಳ ಪಾಠ ಪ್ರವಚನದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಜಿಪಂನಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆಯಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದ್ದರಿಂದ ಶಾಲೆಗೆ ಸರಿಯಾಗಿ ತೆರಳದ ಶಿಕ್ಷಕರು ವೃತ್ತಿಯ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರ ಮೂಲಕ ಮಕ್ಕಳ ಶಿಕ್ಷಣದ ಕಡೆ ಗಮನ ಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ರೂಪಶ್ರೀ, ಬಿಆರ್‍ಸಿ ವಿರೂಪಾಕ್ಷ, ಮುಖ್ಯ ಶಿಕ್ಷಕ ನಟರಾಜು, ಶಿಕ್ಷಕರಾದ ಲೋಕಮಣಿ, ಕಮಲಮ್ಮ ಹಾಗೂ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.