ರಾಜಕಾರಣಿಗಳು, ಅಧಿಕಾರಿಗಳಿಂದ ಜನರಿಗೆ ನಿತ್ಯ ನರಕ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

Update: 2018-08-27 17:19 GMT

ತುಮಕೂರು,ಆ.27: ಸಮಾಜವು ರಾಜಕೀಯ, ಆಡಳಿತಗಾರರ ಸುಳಿಗೆ ಸಿಲುಕಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಜನತೆಯು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಹೊಣೆ ಯುವಜನತೆಯ ಮೇಲಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಡಾ.ಎನ್. ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ. 

ತುಮಕೂರು ವಿಶ್ವ ವಿದ್ಯಾನಿಲಯದ ಡಾ.ಶ್ರೀ ಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ಕ್ರೀಡೆ, ಎನ್ಸಿಸಿ, ಎನ್ಎಸ್ಎಸ್ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾದ ಅವರು, ಇಂದು ರಾಜಕಾರಣ, ಆಡಳಿತ ವ್ಯವಸ್ಥೆ ಲಂಚದ ದುರಾಸೆಗೆ ಬಲಿಯಾಗಿದೆ. ಜೈಲಿಗೆ ಹೋದವರನ್ನು ಬಿಡುಗಡೆಗೊಳಿಸಿ, ಹಾರ ಹಾಕಿ ಸನ್ಮಾನಿಸಿ ರಾಜಕಾರಣಿಗಳಾಗಿ ರೂಪಿಸುವ ಸಮಾಜ ಸೃಷ್ಟಿಯಾಗಿದೆ. ಈ ವ್ಯವಸ್ಥೆ ಮುಂದುವರೆದರೆ ಸಮಾಜದ ಸ್ಥಿತಿ ಅದೋಗತಿಗೆ ತಲುಪುತ್ತದೆ. ಇದನ್ನು ಬದಲಾಯಿಸುವ ಶಕ್ತಿ ಯುವಜನರಲ್ಲಿದೆ ಎಂದು ಹೇಳಿದರು.

ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮೃದ್ಧ, ಸದೃಢವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು, ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಸಮಾಜದಲ್ಲಿನ ಸಮಸ್ಯೆಗಳು ನನ್ನ ಅರಿವಿಗೆ ಬಂದಿರಲಿಲ್ಲ. ಲೋಕಾಯುಕ್ತ ಸೇರಿಕೊಂಡಾಗಲೇ ಸಮಾಜದಲ್ಲಿ ಜನತೆ ಎದುರಿಸುತ್ತಿರುವ ಸಮಸ್ಯೆಗಳು ನನ್ನ ಕಣ್ಮುಂದೆ ಬಂದಿದ್ದು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸುವುದು ಯುವ ಶಕ್ತಿ ಕೈಯಲ್ಲಿದೆ ಎಂದು ಹೇಳಿದರು. 

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ, ಸಮಾಜದ ಏಳಿಗೆಗೆ ಶ್ರಮಿಸಬೇಕು. ದುರಾಸೆ ಕೈಬಿಟ್ಟು ಮಾನವೀಯತೆ ದೃಷ್ಟಿಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕು. ಏನೇ ಆಗು ಮೊದಲು ಮಾನವನಾಗು ಎಂಬ ನೀತಿ ಮೈಗೂಡಿಸಿಕೊಂಡು ಸದೃಢ, ಸಮೃದ್ಧ ದೇಶ ನಿರ್ಮಾಣಕ್ಕೆ ಮುಂದಾಗಿ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಬಿ.ಆರ್.ಶಾಲಿನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News