5 ವರ್ಷ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ: ದಿನೇಶ್ ಗುಂಡೂರಾವ್

Update: 2018-08-27 17:22 GMT

ದಾವಣಗೆರೆ,ಆ.27: ಮುಂದಿನ 5 ವರ್ಷಗಳ ಕಾಲ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ, ಸುಭದ್ರವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಭದ್ರ ಸರಕಾರ ರಚನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಟ್ಟಿದ್ದೇವೆ. ಹಾಗಾಗಿ ಸಮ್ಮಿಶ್ರ ಸರಕಾರ ಐದು ವರ್ಷಗಳ ಕಾಲ ಸುಭದ್ರವಾಗಿರಲಿದೆ ಎಂದರು. 

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಬ್ಬರು ಮುಖ್ಯಮಂತ್ರಿಯಾಗುವುದು ಪ್ರಸ್ತುತ ವಿಚಾರವೇ ಅಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭ ಬಂದಾಗ ಆ ಪ್ರಶ್ನೆ ಉದ್ಭವವಾಗುತ್ತದೆ.  ಸಿದ್ದರಾಮ್ಯಯ ಮತ್ತೆ ಸಿಎಂ ಆಗಬೇಕೆನ್ನುವ ಕೆಲವರ ಹೇಳಿಕೆಗಳು ಅವರ ವೈಯಕ್ತಿಕವಾದುವುಗಳು ಎಂದರು.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತೊಬ್ಬ ಸಿಎಂ ಪ್ರಶ್ನೆಯೆ ಇಲ್ಲಿ ಹುಟ್ಟಿಕೊಳ್ಳುವುದಿಲ್ಲ ಎಂದರು. 

ಉತ್ತಮ ಸಾಧನೆ: ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಇತರೆ ಎಲ್ಲ ಚುನಾವಣೆಗಳಂತೆ ಸ್ಥಳಿಯ ಸಂಸ್ಥೆ ಚುನಾವಣೆ ಕೂಡ ಪ್ರಮುಖವಾದುದು. ರಾಜ್ಯದ 108 ಪೌರ ಸಂಸ್ಥೆಗಳಲ್ಲಿ ಮತ್ತು 3 ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆಯಲಿದೆ. ನಮಗೆ ಇಲ್ಲಿಯವರೆಗೂ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಸಿಗುವ ನಿರಿಕ್ಷೆ ಇದೆ. ಇದಕ್ಕೆ ಹಿಂದಿನ ನಮ್ಮ ಸರ್ಕಾರ ಮಾಡಿದ್ದ ಜನಪರ ಕೆಲಸಗಳು ಹಾಗೂ ಪ್ರಸ್ತುತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ಮುಂದೆ ಆಗಬೇಕಿರುವ ಕೆಲಸಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ ಎಂದು ಹೇಳುತ್ತಿರುವ ಕೆಲವರಿಗೆ ಈ ಚುನಾವಣೆ ಸೂಕ್ತ ಉತ್ತರ ನೀಡಲಿದೆ ಎಂದರು.

ಎಲ್ಲ ರಂಗದಲ್ಲೂ ವಿಫಲ:  ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿ ವಿಫವಾಗಿದೆ. ಯಪಿಎ ಸರ್ಕಾರದ ಅವಧಿಯಲ್ಲಿ ದೇಶದ ಪರಿಸ್ಥಿತಿ ಉತ್ತಮವಾಗಿತ್ತು. 70 ಸಾವಿರ ಕೋಟಿ ರೂ ಮೊತ್ತರ ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ. ಇಂಥಹ ಹತ್ತಾರು ಹಗರಣಗಳನ್ನು ಜನರ ಮುಂದಿಡಬೇಕಿದೆ. ಕಾಂಗ್ರೆಸ್ ಮುಂದಿನ ತಿಂಗಳು ಈ ವಿಷಯವನ್ನು ಕೈಗೆತ್ತಿಕೊಂಡು ಎನ್‍ಡಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗುವುದು ಎಂದರು. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬೂತ್‍ಮಟ್ಟದಿಂದ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News