ದಾವಣಗೆರೆ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಧರಣಿ

Update: 2018-08-27 17:29 GMT

ದಾವಣಗೆರೆ,ಆ.27: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಯದೇವವೃತ್ತದಲ್ಲಿ ಜಮಾಯಿಸಿದ ರೈತರು ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ದಾವಣಗೆರೆ, ಚನ್ನಗಿರಿ ತಾಲೂಕುಗಳ ಗ್ರಾಮಗಳು, ಗುಡಾಳು, ಗುಮ್ಮನೂರು, ಹುಚ್ಚೇನಹಳ್ಳಿ, ಆಲೂರು, ಗಿರಿಯಾಪುರ, ದಾಗಿನಕಟ್ಟೆ, ಯಲೋದಹಳ್ಳಿ, ಜಿ.ಬಿ. ಹಳ್ಳಿ, ಕಂಚಗಾರನಹಳ್ಳಿ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಸಾಗುವಳಿದಾರರು ಈಗಾಗಲೇ ಉಪಸಮಿತಿಗೆ ನಾಲ್ಕು ವರ್ಷಗಳಿಂದಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಬಂದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ರೈತರ ಜಮೀನುಗಳು ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಜಾರಿಗೊಳಿಸುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹಲವಾರು ಬಾರಿ ಸೂಚನೆ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ಇದರಿಂದಾಗಿ ರೈತರು ಅತಂತ್ರ ಸ್ಥಿತಿ ತಲುಪಿದ್ದಾರೆ. ರಾಜ್ಯ ಸರ್ಕಾರ ಮತ್ತೊಮ್ಮೆ ಬಗರ್ ಹುಕುಂ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಯಾವುದೇ ಸಂದರ್ಭದಲ್ಲಿ ದಿನಾಂಕ ನಿಗದಿಪಡಿಸಬಹುದು. ಇದರಿಂದಾಗಿ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತದೆ. ಪಹಣಿಯಲ್ಲಿ ಇವರ ಅರ್ಜಿ ತಿರಸ್ಕಾರಗೊಳ್ಳುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸಿ ರೈತರಿಗೆ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅರಸನಾಳು ಸಿದ್ದಪ್ಪ, ಗುಮ್ಮನೂರು ಬಸವರಾಜ್,ಆಲೂರು ಪರಶುರಾಮ್, ರವಿಕುಮಾರ್, ಚಿರಂಜೀವಿ, ಪ್ರಕಾಶ್, ಉಮೇಶ್, ಹುಚ್ಚನಹಳ್ಳಿ ಪ್ರಕಾಶ್, ದುರುಗಪ್ಪ, ಶಶಿನಾಯ್ಕ, ಕೆಂಚಪ್ಪ, ನಾಗಪ್ಪ, ಹನುಮಂತಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News