ಕಾಂಗ್ರೆಸ್ ಅತೃಪ್ತ ಆತ್ಮಗಳಿಂದಲೇ ಸಮ್ಮಿಶ್ರ ಸರಕಾರ ಪತನ: ಆರ್.ಅಶೋಕ್

Update: 2018-08-27 18:10 GMT

ಮಂಡ್ಯ, ಆ.27: ನಾವೇನು ಸರಕಾರವನ್ನು ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ಅತೃಪ್ತ ಆತ್ಮಗಳೇ ಸರಕಾರ ಪತನವಾಗಲು ಕಾರಣರಾಗಲಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗ್ಲೆಂಡಿಗೆ ಹೋಗುತ್ತಿದ್ದು, ಅಲ್ಲಿಂದಲೇ ಸರಕಾರದ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಸಮ್ಮಿಶ್ರ ಸರಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂಬ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವಧಿಗೆ ಮುನ್ನವೇ ಧರ್ಮಸಿಂಗ್ ಸರಕಾರದ ಮಡಿಕೆ ಒಡೆದು ಹಾಕಿದ್ದೇ ಇದೇ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರೇ ಅಲ್ಲವೇ ಎಂದರು. ಜನಸಾಮಾನ್ಯರಿಗೆ ಯಾವುದೇ ಯೋಜನೆಗಳು ತಲುಪುತ್ತಿಲ್ಲ. ಅಧಿಕಾರಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ. ಸರಕಾರ ಯಾವಾಗ ಬೇಕಾದರೂ ಉರುಳಬಹುದು ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ ಎಂದು ಅವರು ದೂರಿದರು.

ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನಗಳ ನೇಮಕ ಕಿತ್ತಾಟದಿಂದಲೇ ಆಗಿದೆ. ಸರಕಾರ ಇನ್ನೂ ಟೇಕಾಫ್ ಆಗಿಲ್ಲ, ಟೇಕಾಫ್ ಆಗುತ್ತೇ ಎಂಬ ನಂಬಿಕೆಯೂ ಜನರಿಗೆ ಇಲ್ಲವಾಗಿದೆ. ಸಮನ್ವಯ ಸಮಿತಿ ಸಭೆ ನಡೆಯಲು ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಅಭಿವೃದ್ಧಿ ಮಾಡಲು ಸರಕಾರದಲ್ಲಿ ಹಣವಿಲ್ಲದೆ ದಿವಾಳಿಯಾಗಿದ್ದು, ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹುಂಡಿಯಲ್ಲಿರುವ ಸುಮಾರು 124 ಕೋಟಿ ರೂ.ಗಳಿಗೆ ಕನ್ನಹಾಕಲು ಮುಂದಾಗಿದೆ. ದೇವರ ಹುಂಡಿಗೆ ಕೈಹಾಕಿದವರು ಯಾರೂ ಉದ್ಧಾರ ಆಗಿಲ್ಲ ಎಂದು ಅವರು ಎಚ್ಚರಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರಕಾರ ಮಂಡ್ಯ ನಗರಸಭೆ ಸೇರಿದಂತೆ ಮೈಷುಗರ್, ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗೆ ಹೆಚ್ಚು ಅನುದಾನ ನೀಡಿತ್ತು ಎಂದು ಅವರು ಹೇಳಿಕೊಂಡರು. ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಹರಿದುಹೋಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕೆರೆಕಟ್ಟೆ ತುಂಬಿಸುವ ಯತ್ನ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಪಕ್ಷ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿದ್ದು, ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅಂತೆಯೇ ಮುಂದಿನ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ, ಜಿಪಂ ಸದಸ್ಯ ಎನ್.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಗರ ಘಟಕ ಅಧ್ಯಕ್ಷ ಎಚ್.ಆರ್.ಅರವಿಂದ್, ಎಚ್.ಪಿ.ಮಹೇಶ್, ಅಶೋಕ್‍ಕುಮಾರ್ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News