ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಳೆಹಾನಿ: 'ರಾಷ್ಟ್ರೀಯ ವಿಪತ್ತು ಪ್ರದೇಶ'ವೆಂದು ಘೋಷಿಸಲು ಕೆಜಿಎಫ್ ಒತ್ತಾಯ

Update: 2018-08-27 18:23 GMT

ಚಿಕ್ಕಮಗಳೂರು, ಆ.27: ರಾಜ್ಯದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಈ ಬಾರಿ ಅತೀವೃಷ್ಟಿಯಿಂದಾಗಿ ಸಾವಿರಾರು ಎಕರೆ ಕಾಫಿ ತೋಟಗಳೇ ನಾಶವಾಗಿವೆ. ಕರ್ನಾಟಕ ಬೆಳೆಗಾರರ ಸಂಘ ಈ ಸಂಬಂಧ ಖುದ್ದು ಸಮೀಕ್ಷೆ ನಡೆಸಿ ಅಂಕಿ ಅಂಶಗಳ ಸಹಿತ ಮಾಹಿತಿ ಕಲೆ ಹಾಕಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ಕಾಫಿ ತೋಟಗಳಿಗೆ ಹಾನಿಯಾಗಿದ್ದು, ಅಂದಾಜು 4 ಸಾವಿರ ಕೋ. ರೂ. ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ರಾಷ್ಟ್ರೀಯ ವಿಪತ್ತು ಪ್ರದೇಶ ಎಂದು ಕೇಂದ್ರ ಸರಕಾರ ಘೋಷಣೆ ಮಾಡಬೇಕೆಂದು ಸಂಘದ ಅಧ್ಯಕ್ಷ ಬಿ.ಎಸ್.ಜಯರಾಂ ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜಿಎಫ್ ಸಂಘದ ಸದಸ್ಯರು ಇತ್ತೀಚೆಗೆ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದಾಗಿರುವ ಹಾನಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೊಡಗು ಜಿಲ್ಲೆಯೊಂದರಲ್ಲಿ ಅಂದಾಜಿ 4500 ಎಕರೆ ಕಾಫಿ ತೋಟಗಳಿಗೆ ಹಾನಿಯಾಗಿದ್ದು, 3 ಸಾವಿರ ಕೋ.ರೂ. ನಷ್ಟ ಸಂಭವಿಸಿದೆ. ಈ ಜಿಲ್ಲೆಯಲ್ಲಿ ಶೇ.100 ರಷ್ಟು ಬೆಳೆಯಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.50 ರಷ್ಟು ಕಾಫಿ, ಕಾಳು ಮೆಣಸು ಬೆಳೆ ನಷ್ಟವಾಗಿದ್ದರೆ, ಹಾಸನ ಜಿಲ್ಲೆಯಲ್ಲಿ ಶೇ.65-70 ರಷ್ಟು ಬೆಳೆ ಹಾನಿಯಾಗಿದೆ ಎಂದು ಅವರು ವಿವರಿಸಿದರು.

ಅತೀವೃಷ್ಟಿಯಿಂದಾಗಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರ ಬದುಕು ಅತಂತ್ರಗೊಂಡಿರುವುದರಿಂದ ಕೇಂದ್ರ ಸರಕಾರದ ವಾಣಿಜ್ಯ ಸಚಿವಾಲಯ ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕೊಡಗಿನಲ್ಲಿ ಉಂಟಾದ ಭೀಕರ ಅತೀವೃಷ್ಟಿಗೆ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿರುವುದೇ ಕಾರಣ. ಅಲ್ಲಿನ ಭೂಮಿಗೆ ತೇವಾಂಶ ಹಾಗೂ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚು ಮಳೆ ಸುರಿದ ಕಾರಣ ಭೂ ಕುಸಿತ ಉಂಟಾಗಿದೆ. ಅಲ್ಲಿನ ಸಾವಿರಾರು ಬೆಳೆಗಾರರ ಬದುಕಿಗೆ ಆಧಾರವಾಗಿದ್ದ ಕಾಫಿ ತೋಟಗಳು ಜಲ ಸಮಾಧಿಯಾಗಿವೆ. ಅತೀವೃಷ್ಟಿ ತೋಟಗಳನ್ನು ಕಳೆದುಕೊಂಡವರಿಗೆ ಸರಕಾರ ಬದಲಿ ಭೂಮಿ ನೀಡಬೇಕೆಂದು ಅಲ್ಲಿನ ಬೆಳೆಗಾರರು ಮನವಿ ಮಾಡಿದ್ದು, ಸರಕಾರ ಈ ಸಂಬಂಧ ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಕ್ರಮವಹಿಸಬೇಕೆಂದರು.

ಅತೀವೃಷ್ಟಿಗೆ ಕಾಫಿ ಬೆಳೆಗಾರರೇ ಕಾರಣ ಎಂದು ಕೆಲ ಪರಿಸರವಾದಿಗಳು ಆರೋಪ ಮಡುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಹವಾಮಾನ ಇಲಾಖೆ ಮುಂಚಿತವಾಗಿ ಭಾರೀ ಮಳೆಯಾಗುವ ಬಗ್ಗೆ ಮನ್ಸೂಚನೆ ನೀಡಿದ್ದರೂ, ಜಿಲ್ಲೆಯ ಹಾರಂಗಿ ಜಲಾಶಯದ ನೀರನ್ನು ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ದಿಢೀರ್ ಹೊರಕ್ಕೆ ಬಿಟ್ಟ ಪರಿಣಾಮ ಎಲ್ಲೆಡೆ ಪ್ರವಾಹ, ನೆರೆ ಆವರಿಸುವಂತಾಯಿತು. ಇದನ್ನು ಬೆಂಗಳೂರಿನ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿಯೊಬ್ಬರು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಪರಿಸರವಾದಿಗಳು ಮನಗಾಣಬೇಕೆಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಜಿಎಫ್ ಸದಸ್ಯರಾದ ಎಂ.ಕೆ.ಪ್ರದೀಪ್, ಪ್ರದೀಶ್, ಲಿಂಗಪ್ಪಗೌಡ, ಬಾಲಕೃಷ್ಣ, ಆಲ್ದೂರು ಸುರೇಶ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಅತೀವೃಷ್ಟಿಗೆ ಹೋಂ ಸ್ಟೇ ಕಾರಣವಲ್ಲ: 
ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲ ಬೆಳೆಗಾರರು ನಿರ್ಮಿಸಿಕೊಂಡಿರುವ ಹೋಂ ಸ್ಟೇಗಳಿಂದಾಗಿ ಭೂ ಕುಸಿತದಂತಹ ಘಟನೆಗಳು ಸಂಭವಿಸಿವೆ ಎಂದು ಪರಿಸರವಾದಿಗಳು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಕೊಡಗಿನ ಪಟ್ಲಾ, ಮಾದಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳೇ ಇಲ್ಲ. ಆದರೂ ಆ ಭಾಗದಲ್ಲಿ ಹೆಚ್ಚು ಭೂ ಕುಸಿತ ಉಂಟಾಗಿದೆ. ಕೆಲವರು ಸರಕಾರದಿಂದ ಪರವಾನಿಗೆ ಪಡೆದು ಹೋಂಸ್ಟೇಗಳ ಪರಿಕಲ್ಪನೆಗೆ ವಿರುದ್ಧವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಹೋಂಸ್ಟೇಗಳು ಮನಬಂದಂತೆ ನಿರ್ಮಾಣವಾಗುತ್ತಿವೆ. ಇದಕ್ಕೆ ಸರಕಾರದ ಕಡಿವಾಣ ಅಗತ್ಯ. ಆದರೆ ಅತೀವೃಷ್ಟಿಗೆ ಹೋಂ ಸ್ಟೇಗಳೇ ಕಾರಣ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.
- ಎಂ.ಕೆ.ಪ್ರದೀಪ್, ಕೆಜೆಎಫ್ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News