ಡಿಎಂಕೆ ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಸರ್ವಾನುಮತದಿಂದ ಆಯ್ಕೆ

Update: 2018-08-28 07:03 GMT

ಚೆನ್ನೈ, ಆ.28: ಡಿಎಂಕೆ ಪಕ್ಷದ ನೂತನ ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಮಂಗಳವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ 65ರ ಹರೆಯದ ಸ್ಟಾಲಿನ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲು ನಿರ್ಧರಿಸಲಾಯಿತು.  2017ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸ್ಟಾಲಿನ್ ರವಿವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು.

‘‘ಸ್ಟಾಲಿನ್‌ರನ್ನು ಬೆಂಬಲಿಸಿ 1300 ಅರ್ಜಿಗಳು ಸಲ್ಲಿಸಲ್ಪಟ್ಟಿದ್ದು ಅವರ ವಿರುದ್ಧ ಯಾರೂ ಸ್ಪರ್ಧಿಸಿಲ್ಲ. ಸ್ಟಾಲಿನ್ ಪಕ್ಷದ ನೂತನ ಅಧ್ಯಕ್ಷರಾಗಿ, ಪಕ್ಷದ ಹಿರಿಯ ನಾಯಕ ದೊರೈ ಮುರುಗನ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ’’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅನ್ಬಗನ್ ಹೇಳಿದ್ದಾರೆ.

ಡಿಎಂಕೆ ವರಿಷ್ಠ ನಾಯಕ ಕರುಣಾನಿಧಿ ಮೂರು ವಾರಗಳ ಹಿಂದೆ ನಿಧನರಾದ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನ ತೆರವಾಗಿತ್ತು. 1969ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕರುಣಾನಿಧಿ 49 ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪುತ್ರರಾದ ಸ್ಟಾಲಿನ್ ಹಾಗೂ ಎಂಕೆ ಅಳಗಿರಿ ನಡುವೆ ಪೈಪೋಟಿ ಏರ್ಪಟ್ಟಿತ್ತ್ತು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಕಾರಣಕ್ಕೆ 2014ರಲ್ಲಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಅಳಗಿರಿ, ತನಗೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದರು. ಸ್ಟಾಲಿನ್ ನಾಯಕತ್ವವನ್ನು ಪ್ರಶ್ನಿಸಿದ್ದರು.

ಇಂದು ಬೆಳಗ್ಗೆ ಡಿಎಂಕೆ ಪ್ರಧಾನ ಕಚೇರಿಯ ಹೊರಗೆ ಕಪ್ಪು ಹಾಗೂ ಕೆಂಪು ಬಣ್ಣದ ಪಕ್ಷದ ಧ್ವಜಗಳನ್ನು ಕಟ್ಟಿ ಶೃಂಗರಿಸಲಾಗಿದ್ದು ಹಬ್ಬದ ವಾತಾವರಣ ಕಂಡು ಬಂದಿತ್ತು.

ಕರುಣಾನಿಧಿ ಅನಾರೋಗ್ಯಕ್ಕೆ ಒಳಗಾದ ಬಳಿಕ ಕಳೆದ ಸುಮಾರು ಒಂದು ವರ್ಷದಿಂದ ಪಕ್ಷದ ಎಲ್ಲ ಚಟುವಟಿಕೆಯನ್ನು ಸ್ಟಾಲಿನ್ ನೋಡಿಕೊಳ್ಳುತ್ತಿದ್ದರು. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎರಡು ಬಾರಿ ಚೆನ್ನೈ ಮೇಯರ್ ಆಗಿದ್ದ ಸ್ಟಾಲಿನ್ ತಂದೆಯ ಬೆಂಬಲದಿಂದ ಬೆಳೆದ ನಾಯಕ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ನೇತೃತ್ವವನ್ನು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News