ರಾಜ್ಯದ 13 ಜಿಲ್ಲೆಗಳು ಬರಗಾಲ ಎದುರಿಸುತ್ತಿವೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-28 14:26 GMT

ಮೈಸೂರು,ಆ.28: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಉಂಟಾಗಿ ಹಾನಿ ಸಂಭವಿಸಿದ್ದರೆ, ಇನ್ನೂ 13 ಜಿಲ್ಲೆಗಳು ಮಳೆಯಾಗದೆ ಬರಗಾಲ ಎದುರಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಮಂಗಳವಾರ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ 'ರಾಜೇಂದ್ರ ಚಿತ್ರಸಂಪುಟ' (ಇಂಗ್ಲೀಷ್) ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. 'ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಉಂಟುಮಾಡಿದೆ, ಇನ್ನು ಅತಿವೃಷ್ಟಿವುಂಟಾಗಿ ಹಲವರು ನಿರಾಶ್ರಿತರಾಗಿದ್ದಾರೆ. ಆದರೆ ಇನ್ನೂ 13 ಜಿಲ್ಲೆಗಳು ಮಳೆಯಿಲ್ಲದೆ ಬರಗಾಲ ಎದುರಿಸುತ್ತಿವೆ. ಆ ಜಿಲ್ಲೆಗಳು ಬರಗಾಲದಿಂದ ಹೊರ ಬರುವಂತೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಯಲ್ಲಿ ಕೇಳಿಕೊಳ್ಳುವುದಾಗಿ ಹೇಳಿದರು.

ಸುತ್ತೂರು ಮಠ ದೇಶದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಸುತ್ತೂರು ಶ್ರೀಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ. ಸುತ್ತೂರು ಮಠ ಮತ್ತು ನಮಗೂ ತಂದೆ ಮಕ್ಕಳ ಸಂಬಂಧ. ಹಾಗಾಗಿ ಸುತ್ತೂರು ಮಠದ ಬಗ್ಗೆ ನಮಗೆ ಹೆಚ್ಚಿನ ಗೌರವವಿದೆ ಎಂದು ಹೇಳಿದರು.

ಅನ್ನದಾಸೋಹ, ಶಿಕ್ಷಣದಾಸೋಹದ ಮೂಲಕ ಉತ್ತಮ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸುಮಾರು 50 ಸಾವಿರ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ರಾಜ್ಯ, ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ತನ್ನ ಕಾರ್ಯವನ್ನು ಮುಂದುವರೆಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಯಡಿಯೂರಪ್ಪ ಅವರ ಕ್ಷಮೆ ಕೇಳಿದ ಸಿಎಂ ಕುಮಾರಸ್ವಾಮಿ

ವಿಧಾಸಭೆ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಿದ ಪ್ರಸಂಗ ನಡೆಯಿತು.

ಸುತ್ತೂರಿನಲ್ಲಿ ಮಂಗಳವಾರ ನಡೆದ ರಾಜೇಂದ್ರ ಸ್ವಾಮೀಜಿಗಳ 103ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಲು ಪ್ರಾರಂಭಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ವೇದಿಕೆಯಲ್ಲಿದ್ದ ಎಲ್ಲರ ಹೆಸರನ್ನು ಹೇಳಿ ತಮ್ಮ ಭಾಷಣ ಆರಂಭಿಸಿದರು. ತಕ್ಷಣ ಯಡಿಯೂರಪ್ಪ ಅವರ ಹೆಸರನ್ನು ಹೇಳಲು ಮರೆತಿರುವುದನ್ನು ಮನಗಂಡ ಅವರು, ಯಡಿಯೂರಪ್ಪ ಅವರ ಹೆಸರನ್ನು ಹೇಳಲಿಲ್ಲ, ದಯವಿಟ್ಟು ಕ್ಷಮೆಯಿರಲಿ ಎಂದು ತಮ್ಮ ಮಾತು ಮುಂದುವರೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News