ತರೀಕೆರೆ: ತಾಪಂ ತ್ರೈಮಾಸಿಕ ಕೆಡಿಪಿ ಸಭೆ: ಇಲಾಖಾಧಿಕಾರಿಗಳ ಕಾರ್ಯ ವೈಖರಿಗೆ ಜನಪ್ರತಿನಿಧಿಗಳ ಆಕ್ರೋಶ

Update: 2018-08-28 17:38 GMT

ತರೀಕೆರೆ, ಆ.28: ಇಲ್ಲಿನ ತಾಲೂಕು ಪಂಚಾಯತ್‍ನ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಕ್ಷೇತ್ರದ ಶಾಸಕ ಡಿ.ಎಸ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆಯಿತು. 

ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗುವ ಮೊದಲು ಸರಿಯಾದ ಮಾಹಿತಿಗಳೊಂದಿಗೆ, ಬರಬೇಕು ಸಭೆಯಲ್ಲಿ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ಜೊತೆಗೆ ಹಿಂದಿನ ಸಭೆಯ ನಡವಳಿಕೆಯ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡುವಂತೆ ಶಾಸಕ ಡಿ.ಎಸ್.ಸುರೇಶ್ ರವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಪಟ್ಟಣದ ಲಿಂಗದಹಳ್ಳಿ ರಸ್ತೆಯ ಗಿರಿ ನಗರದ ಬಾಲಕರ ಕಾಲೇಜು ವಿದ್ಯಾರ್ಥಿ ನಿಲಯ ಅವ್ಯವಸ್ಥೆಯಿಂದ ಕೂಡಿದ್ದು, ನಿಲಯ ಮೇಲ್ವಿಚಾರಕ ಸರಿಯಾಗಿ ಬರುತ್ತಿಲ್ಲ. ಅಲ್ಲಿನ ಚರಂಡಿ ಭರ್ತಿಯಾಗಿದ್ದು ಸ್ವಚ್ಚತೆ ಇಲ್ಲ. ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಭೆಗಳೇ ನಡೆಸುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಅಲ್ಲಿನ ಮಾಹಿತಿಯನ್ನು ಪಡೆಯಬೇಕು. ವಿದ್ಯುತ್ ಲೈನ್‍ನಲ್ಲಿ ಕಾಪರ್ ತಂತಿ, ಹಳೆ ಲೈನ್ ಬದಲಾವಣೆ ವಿದ್ಯುತ್ ವ್ಯವಸ್ಥೆ ಬಗ್ಗೆ ಅಲ್ಲಿನ ಎಸ್.ಓ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಾಲೂಕಿನಾದ್ಯಂತ ಎಂ.ಜಿ.ಎನ್.ಆರ್.ಜಿ. ಯೋಜನೆಯ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಿರಂತರ ವಿದ್ಯುತ್ ಪೂರೈಕೆ ಕಾಮಗಾರಿ ಲೈನ್ ಕಂಬಗಳನ್ನು ರಸ್ತೆಯ ಬದಿಯ ಚರಂಡಿಯಲ್ಲಿ ನಡೆಯುತ್ತಿರುವುದರಿಂದ ಮುಂದೆ ತೊಂದರೆಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರಲ್ಲದೇ, ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಎಚ್ಚರಿಕೆ ನೀಡಿದರು. 

ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ, ಅಪಘಾತ ಹಾಗೂ ಸಾವು ಸಂಭವಿಸಿದ ಸಂದರ್ಭದಲ್ಲಿ ಕರೆ ಮಾಡಿ ಗಂಟೆಯಾದರೂ 108 ವಾಹನ ಆಗಮಿಸುವುದಿಲ್ಲ. ಈ ಬಗ್ಗೆ ಪಶುಪಾಲನಾ ಇಲಾಖೆಯ ಕೆಲವು ಭಾಗದಲ್ಲಿ ಮೇವು ಕಿರು ಪೊಟ್ಟಣಗಳನ್ನು ರೈತರಿಗೆ ವಿತರಣೆ ಮಾಡಿರುವುದಿಲ್ಲ ಹಾಗೂ ಅಂಗನವಾಡಿ ಕಟ್ಟಡಗಳು ತಾಲೂಕಿನಾದ್ಯಂತ ಬಹಳಷ್ಟು ಶಿಥಿಲಗೊಂಡಿದ್ದು, ಅವುಗಳ ದುರಸ್ಥಿ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸದಿರುವುದಕ್ಕೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. 

ಕೆ.ಆರ್.ಐ.ಡಿ.ಎಲ್‍ನವರು ತಾಲೂಕಿನಾದ್ಯಂತ ಗುತ್ತಿಗೆ ಪಡೆದಿರುವ ವಿವಿಧ ಕಟ್ಟಡಗಳ ನಿರ್ಮಾಣ ಕಾಮಗಾರಿ 3-4 ವರ್ಷ ಕಳೆದರು ಪೂರ್ಣಗೊಂಡಿಲ್ಲ. ಹಾಗೂ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆದಿಲ್ಲ. ಹಣ ಮಂಜೂರಾದರೂ ಏಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಕೆ.ಆರ್. ಆನಂದಪ್ಪ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಇಂಜಿನಿಯರ್ ಡಾ.ಡೆಲ್ವಿ ಸಮಪರ್ಕ ಉತ್ತರ ನೀಡದಿದ್ದಾಗ ಅಸಮಾಧಾನಗೊಂಡ ಶಾಸಕ ಡಿ.ಎಸ್.ಸುರೇಶ್, ತಾಲೂಕಿನಲ್ಲಿ ಯಾವ ಯಾವ ಕಟ್ಟಡಗಳ ನಿರ್ಮಾಣದ ಗುತ್ತಿಗೆ ಪಡೆದಿದ್ದಾರೆ ಎಷ್ಟು ಕಟ್ಟಡಗಳ ಕಾಮಗಾರಿ ಪ್ರಾರಂಭವಾಗಿದೆ.  ಕಾಮಗಾರಿಗೆ ಸಂಬಂಧಿಸಿದಂತೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುವಂತೆ ತಾಲೂಕು ಪಂ. ಕಾರ್ಯ ನಿರ್ವಾಹಣಾಧಿಕಾರಿಗೆ ಸೂಚಿಸಿದರು.

ಅಭಿವೃದ್ದಿ ಕಾರ್ಯಗಳಲ್ಲಿ ಜನ ಪ್ರತಿನಿಧಿಗಳೊಂದಿಗೆ ಇಲಾಖೆಯ ಅಧಿಕಾರಿಗಳು ಪ್ರಾಮಾಣೀಕ ಕಾರ್ಯ ನಿರ್ವಹಣೆಯ ಮೂಲಕ ಜನಪ್ರತಿನಿಧಿಗಳೊಂದಿಗೆ ಕೈ ಜೊಡಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಸುರೇಶ್ ಕಿವಿ ಮಾತು ಹೇಳಿದರು. 

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಮಂಜುಳಾಬಾಯಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ ಮೂರ್ತಿ, ತಹಶೀಲ್ದಾರ್ ಧರ್ಮೋಜಿರಾವ್, ಜಿಲ್ಲಾ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News