×
Ad

ಚಿಕ್ಕತ್ತೂರು ಗ್ರಾಮದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ: ಭಯಭೀತರಾದ ಗ್ರಾಮಸ್ಥರು

Update: 2018-08-28 23:15 IST

ಮಡಿಕೇರಿ, ಆ.28: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಮತ್ತೊಮ್ಮೆ ಹುಲಿ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ಬೆಂಡೆಬೆಟ್ಟ ಮತ್ತು ಹಾರಂಗಿ ಕಾಡಿಗೆ ಹೊಂದಿಕೊಂಡಂತಿರುವ ಆನೆಕಾಡು ಸಮೀಪದಲ್ಲಿ ಜಮೀನಿಗೆ ತೆರಳಿದ್ದ ರೈತರು ಜಿಂಕೆಯನ್ನು ಅಟ್ಟಿಸಿಕೊಂಡು ಬರುತ್ತಿದ್ದ ಹುಲಿಯನ್ನು ಕಂಡು ಭಯಭೀತರಾಗಿದ್ದಾರೆ. ಬೆನ್ನಟ್ಟಿದ್ದ ಹುಲಿಯಿಂದ ತಪ್ಪಿಸಿಕೊಳ್ಳಲು ಮೂರು ಜಿಂಕೆಗಳು ರೈತರ ಜಮೀನಿಗೆ ಕಾಲುವೆಯನ್ನು ಹಾರಿ ಬಂದಿದ್ದು, ಈ ಸಂದರ್ಭ ಸ್ಥಳೀಯ ಗ್ರಾಮಸ್ಥರ ಕೂಗಾಟಕ್ಕೆ ಬೆದರಿದ ಹುಲಿ ಕಾಡಿನೊಳಗೆ ನುಗ್ಗಿದೆ. ನಂತರ ಜಿಂಕೆಗಳು ಸಹ ಭಯದಿಂದ ಮತ್ತೆ ಕಾಡಿನೊಳಗೆ ಓಡಿರುವುದಾಗಿ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಅರಣ್ಯ ಇಲಾಖೆಯವರಿಗೆ ಸುದ್ಧಿ ಮುಟ್ಟಿಸಿದ್ದು, ಹುಲಿಯು ಬೆಳಗ್ಗೆ ಆನೆಕಾಡಿನಂಚಿನಿಂದ ಬೆಂಡೆಬೆಟ್ಟಕ್ಕೆ ಹೊಂದಿಕೊಂಡಂತಿರುವ ಚಿಕ್ಕತ್ತೂರು ಗ್ರಾಮದತ್ತ ಆಹಾರ ಹುಡುಕುತ್ತಾ ಬಂದಿರಬಹುದೆಂದು ಶಂಕಿಸಲಾಗಿದೆ.

ಈ ಕಾಡಿನಂಚಿನಲ್ಲಿ ಸುಮಾರು 50 ಎಕರೆಯಷ್ಟು ಜಮೀನು ಹೊಂದಿರುವ ರೈತರು ತಮ್ಮ ಕೃಷಿ ಭೂಮಿಯ ಸಮೀಪದಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಹುಲಿಯನ್ನು ಅರಣ್ಯ ಇಲಾಖೆಯವರು ಕಾಡಿನೊಳಕ್ಕೆ ಓಡಿಸಬೇಕು ಅಥವಾ ಹಿಡಿಯುವ ಪ್ರಯತ್ನ ಮಾಡಬೇಕು ಎಂದು ವಾಂಚಿರ ಮನು ನಂಜುಂಡ, ರಾಜು, ಕೃಷ್ಣಪ್ಪ, ಹೆಚ್.ಡಿ.ಚಂದ್ರು ಎ.ಸಿ.ರಾಜು, ಇಬ್ರಾಹಿಂ, ತಮ್ಮಣ್ಣ ಹಾಗೂ ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News