ಸರಕಾರ ಪತನದ ಕನಸು ಕಾಣುತ್ತಿರುವ ಬಿಜೆಪಿ: ಸಿದ್ದರಾಮಯ್ಯ

Update: 2018-08-29 13:35 GMT

ಹುಬ್ಬಳ್ಳಿ, ಆ.29: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರ ಬದಲಾಗುತ್ತದೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಯಸುತ್ತಿರುವಂತೆ ಯಾವ ಬದಲಾವಣೆಗಳು ಆಗುವುದಿಲ್ಲ. ಸಮ್ಮಿಶ್ರ ಸರಕಾರ ಸುಭದ್ರವಾಗಿದೆ ಎಂದರು. ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಆಗ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗ ಸಮ್ಮಿಶ್ರ ಸರಕಾರದ ಆಡಳಿತ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸೇರಿ ಸರಕಾರ ರಚನೆ ಮಾಡಿವೆ. ಸರಕಾರದಲ್ಲಿ ನಮ್ಮ ಪಕ್ಷದವರು ಸಚಿವರಾಗಿದ್ದಾರೆ. ಹೀಗಾಗಿ, ನಮ್ಮನ್ನು ಸರಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಜೆಡಿಎಸ್ ಪಕ್ಷದ ವತಿಯಿಂದ ಯಾವುದೇ ಪತ್ರವನ್ನು ಬರೆದಿಲ್ಲ. ದೂರನ್ನು ನೀಡಿಲ್ಲ. ಮುಂದಿನ ಚುನಾವಣೆಗೆ ನಾನು ನಿಲ್ಲುತ್ತೇನೆ ಎಂದು ಹೇಳಿಲ್ಲ. ಜನರು ಆಶೀರ್ವಾದ ಮಾಡಿದರೆ ಮುಂದೆ ಮುಖ್ಯಮಂತ್ರಿಯಾಗುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದು ಅವರು ಹೇಳಿದರು.

ನಮ್ಮ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಎಲ್ಲ ಯೋಜನೆಗಳಿಗೆ ಸಮ್ಮಿಶ್ರ ಸರಕಾರದಿಂದ ಹಣ ಬಿಡುಗಡೆಯಾಗುತ್ತದೆ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗುವುದು ಬೇಡ. ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News