ವಿಚಾರ, ಚಿಂತನೆ, ಪ್ರವಚನಗಳು ಜೀವನ ಪೂರ್ತಿ ಉಳಿಯುತ್ತವೆ: ಮುರುಘಾ ಶ್ರೀ
ದಾವಣಗೆರೆ,ಆ.29: ರಸದೌತಣದ ಊಟೋಪಚಾರಗಳು ಕೇವಲ ನಾಲ್ಕು ಗಂಟೆಗಳ ನಂತರ ಕ್ಷೀಣಿಸುತ್ತವೆ. ಆದರೆ ವಿಚಾರಗಳು, ಚಿಂತನೆಗಳು, ಪ್ರವಚನಗಳು ಜೀವನ ಪೂರ್ತಿ ಉಳಿಯುತ್ತವೆ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯ ಪಟ್ಟರು.
ನಗರದ ವಿರಕ್ತಮಠದಲ್ಲಿ ಶ್ರಾವಣ ಮಾಸದ 108ನೇ ವರ್ಷದ ಕ್ರಾರ್ಯಕ್ರಮದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿರುವ ಚರಿತಾಮೃತ ಪ್ರವಚನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು. ನಾವು ತಿನ್ನುವ ಆಹಾರ ಹೇಗೆ ಪಚನ ಆಗುತ್ತದೋ ಅದೇ ರೀತಿಯಾಗಿ ಕೇಳುವ ಪ್ರವಚನಗಳು ಪಚನ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಮಗೆ ಹೊಟ್ಟೆಯ ಆಹಾರವೇ ಮುಖ್ಯವಲ್ಲ. ನಮ್ಮ ಸುಂದರ ಜೀವನಕ್ಕೆ ಇಂತಹ ಪ್ರವಚನಗಳು, ವಚನಗಳು ಪ್ರಮುಖವಾಗಿವೆ. ಪ್ರವಚನಗಳು ನಮಗೆ ಬೇಗನೆ ಪಚನ ಆಗುವುದಿಲ್ಲ. ಅವುಗಳ ಪಚನಕ್ಕೆ ಪ್ರಯತ್ನಿಸಬೇಕೆಂದ ಅವರು, ಇದೇ 31ರಂದು ಅಮೆರಿಕಾದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸೇರಿಕೊಂಡು ಅಕ್ಕ ಸಮ್ಮೇಳನ ನಡೆಸುತ್ತಿದ್ದು, ಆ ಸಮ್ಮೇಳನದಲ್ಲಿ 3ರಿಂದ 5 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಲಿಂಗಾರ್ಚನೆ, ಲಿಂಗಧ್ಯಾನ, ಲಿಂಗಾನುಭವ, ಧ್ಯಾನ ಸೇರಿದಂತೆ ಶರಣರ ವಿಷಯಗಳನ್ನು ಅಲ್ಲಿ ತಿಳಿಸಿಕೊಡಲಾಗುತ್ತದೆ. ಆ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ತಮಗೆ ಆಮಂತ್ರಣ ಬಂದಿದ್ದು, ತಾವು ಭಾಗವಹಿಸುತ್ತಿರುವುದಾಗಿ ಶರಣರು ಹೇಳಿದರು.
ಐತಿಹಾಸಿಕ ಹಿನ್ನಲೆಯ ಹೊಂದಿರುವ ವಿರಕ್ತಮಠ ಈಗ ಹೊಸ ಕಳೆಯನ್ನು ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಒಂದು ತಿಂಗಳ ಕಾಲ ನಡೆಯುವ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು, ಶರಣ ವಿಚಾರಧಾರೆ ಆಲಿಸಬೇಕೆಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಹಿನ್ನಲೆ ಹೊಂದಿರುವ ವಿರಕ್ತಮಠದಲ್ಲಿ ಮೊದಲ ಬಾರಿಗೆ ಶ್ರಾವಣ ಮಾಸದ ತಿಂಗಳ ಪ್ರವಚನ, ಬಸವ ಜಯಂತಿ ಆಚರಣೆ ಮಾಡಲಾಯಿತು. ಅದೇ ರೀತಿಯಾಗಿ ಶ್ರೀ ಮುರುಘಾ ಶರಣರ ನೇತೃತ್ವದಲ್ಲಿ ಶೈಕ್ಷಣಿಕ ದಾಸೋಹ ಆರಂಭವಾಗಿದೆ. ಈ ವರ್ಷ ಡಾ.ಶಿವಮೂರ್ತಿ ಮುರುಘಾ ಶರಣರ ಹೆಸರಿನಲ್ಲಿ ಪಿಯುಸಿ ವಾಣಿಜ್ಯ ಕಾಲೇಜು ಆರಂಭವಾಗಿದೆ. ಬರುವ ವರ್ಷದಿಂದ ವಿಜ್ಞಾನ ವಿಭಾಗ ಪ್ರಾರಂಭ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೋತಿ ವೀರಣ್ಣ, ಮೇಯರ್ ಶೋಭಾ ಪಲ್ಲಾಗಟ್ಟಿ, ಪ್ರವಚನಕಾರ ಬಸವರಾಜೇಂದ್ರ ಶರಣರು ಪಾಲ್ಗೊಂಡಿದ್ದರು. ಹಾಸಬಾವಿ ಕರಿಬಸಪ್ಪ ಸ್ವಾಗತಿಸಿದರು.