ಕೊಡಗು ಜಿಲ್ಲೆಗೆ 115 ಕೋಟಿ ರೂ. ಬಿಡುಗಡೆ: ಸಚಿವ ಸಾ.ರಾ.ಮಹೇಶ್

Update: 2018-08-29 16:26 GMT

ಮಡಿಕೇರಿ, ಆ.29 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅತಿವೃಷ್ಟಿಗೆ ಪ್ರಥಮ ಹಂತದಲ್ಲಿ 5 ಕೋಟಿ, 2ನೇ ಹಂತದಲ್ಲಿ 20 ಕೋಟಿ, 3 ನೇ ಹಂತದಲ್ಲಿ 85 ಕೋಟಿ, ಒಟ್ಟು 115 ಕೋಟಿ ರೂ.ವನ್ನು ಜಿಲ್ಲಾಧಿಕಾರಿ ಅವರ ಖಾತೆಗೆ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ತಿಳಿಸಿದರು.    

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಮುಖ್ಯಮಂತ್ರಿಯವರ ಆದೇಶದಂತೆ ಪ್ರವಾಸೋದ್ಯಮ ಇಲಾಖೆಯಿಂದ 25 ಕೋಟಿ ರೂ.ವನ್ನು ಜಿಲ್ಲೆಗೆ ಬಿಡುಗಡೆ ಮಾಡುತ್ತಿದ್ದೇನೆಂದು ಪ್ರಕಟಿಸಿದರು. ಅತಿವೃಷ್ಟಿಯಿಂದ ನಿರಾಶ್ರಿತರಾದ 1736 ಮಂದಿಗೆ ತಲಾ 3800 ರೂ ಪರಿಹಾರದ ಚೆಕ್ ನೀಡಲಾಗಿದೆ. ಇದುವರೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ 16 ಮಂದಿ ಮೃತ ಪಟ್ಟಿದ್ದು, 14 ಮಂದಿ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.  

ದೂರದ ಮನೆ ಬೇಡ
ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಹತ್ತಿರದಲ್ಲೇ ಮನೆ ನಿರ್ಮಿಸಿಕೊಡಲು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲು ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಏಕರೆ ಜಾಗ, ಕೆ.ನಿಡುಗಡೆ ಗ್ರಾ.ಪಂ.ವ್ಯಾಪ್ತಿಯ ಆರ್‍ಟಿಒ ಕಚೇರಿ ಬಳಿ 4.80 ಎಕರೆ ಜಾಗ, ಬಿಳಿಗೇರಿ ಬಳಿ 3.70 ಎಕರೆ ಜಾಗ ಗುರುತಿಸಲಾಗಿದೆ. ಹಾಗೆಯೇ ಮಾದಾಪುರ ತೋಟಗಾರಿಕಾ ಇಲಾಖಾ ವ್ಯಾಪ್ತಿಯ ಜಾಗ ಲಭ್ಯವಿದ್ದು, ಇಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಡಬಹುದಾಗಿದೆ. ಆದ್ದರಿಂದ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.  

ಈ ಸಂದರ್ಭ ಮಧ್ಯ ಪ್ರವೇಶಿಸಿದ ಶಾಸಕ ಕೆ.ಜಿ.ಬೋಪಯ್ಯ, ಅತಿವೃಷ್ಟಿಗೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ಅವರವರ ಜಾಗದ ಬಳಿಯೇ ಮನೆ ನಿರ್ಮಿಸಿಕೊಡಬೇಕು ಎಂದು ಸಲಹೆ ಮಾಡಿದರು. ಪ್ರವಾಹ ಪೀಡಿತಕ್ಕೆ ಒಳಗಾದ ಹಲವು ಕುಟುಂಬಗಳು 40-50 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿದ್ದರು, ಅಂತವರು ಶೆಡ್‍ಗಳಲ್ಲಿ ವಾಸ ಮಾಡಲು ಮುಂದೆ ಬರುತ್ತಾರೆಯೇ? ಆದ್ದರಿಂದ ಕನಿಷ್ಠ 10 ಸೆಂಟು ಜಾಗ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಾ.ರಾ.ಮಹೇಶ್, ಅತಿವೃಷ್ಟಿಯಿಂದ ಸಂತ್ರಸ್ತರಾದವರಲ್ಲಿ ಲೈನ್ ಮನೆಗಳಲ್ಲಿ ವಾಸಮಾಡುತ್ತಿದ್ದವರು ಇದ್ದಾರೆ. ಜೊತೆಗೆ ತೋಟದಲ್ಲಿ ಉತ್ತಮ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದವರೂ ಇದ್ದಾರೆ. ಅಂತಹವರನ್ನು ಗುರುತಿಸಿ ಆಯಾಯ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡುವುದು ಒಳ್ಳೆಯದು ಎಂದು ಅವರು ಹೇಳಿದರು.

ಅತಿವೃಷ್ಟಿಯಿಂದಾಗಿ 6 ಗ್ರಾ.ಪಂ.ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಗ್ರಾ.ಪಂ.ಗಳ ನಿರಾಶ್ರಿತ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ನ್ಯಾಯಬೆಲೆ ಅಂಗಡಿಯ ಮೂಲಕವೇ ವಿತರಿಸಬೇಕು. ಯಾವುದೇ ರೀತಿಯಲ್ಲಿ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಚರಂಡಿ ಮತ್ತು ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮಾಹಿತಿ ಒದಗಿಸುವಂತೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಗೆ ಸೂಚಿಸಿದರು.   

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಅತಿವೃಷ್ಟಿಯಿಂದಾಗಿ 2,108 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಅತಿವೃಷ್ಟಿಗೆ ತುತ್ತಾಗಿ ನಿರಾಶ್ರಿರಾದ ಮಕ್ಕಳನ್ನು ಕಡ್ಡಾಯವಾಗಿ ಹತ್ತಿರದ ಶಾಲೆಗೆ ಸೇರಿಸಬೇಕು, ಜೊತೆಗೆ ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕ ವಿತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು. 

ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಹಟ್ಟಿಹೊಳೆಯಲ್ಲಿ ವಿದ್ಯಾರ್ಥಿ ನಿಲಯ ಆರಂಭಿಸಿ ವಿದ್ಯಾಥಿಗಳಿಗೆ ಶಿಕ್ಷಣ ನೀಡುವಂತಾಗಬೇಕು. ಹಾಗೆಯೇ ಚೆನ್ನಮ್ಮ ಜೂನಿಯರ್ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ತೊಂದರೆಯಾಗಿದೆ. ಈ ಸಂಬಂಧ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅತಿವೃಷ್ಟಿಯಿಂದಾಗಿ ಬಸ್‍ಪಾಸ್ ಕಳೆದುಕೊಂಡವರಿಗೆ ಬಸ್ ಪಾಸ್ ನೀಡುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಟ್ಟಿಹೊಳೆ, ಸೂರ್ಲಬ್ಬಿ, ಗರ್ವಾಲೆ, ಶಾಂತಳ್ಳಿ ಮಾರ್ಗಗಳಿಗೆ ಮಿನಿ ಬಸ್ ಸಂಪರ್ಕವನ್ನು ತಕ್ಷಣವೇ ಕಲ್ಪಿಸುವಂತೆ ಎಂ.ಪಿ.ಅಪ್ಪಚ್ಚು ರಂಜನ್ ಅವರು ನಿರ್ದೇಶನ ನೀಡಿದರು.  

ತೀವ್ರ ಅತಿವೃಷ್ಟಿಯಿಂದಾಗಿ ಅಶುಚಿತ್ವ ಮತ್ತಿತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳು ಬರದಂತೆ ಎಚ್ಚರಿಕೆ ವಹಿಸಬೇಕು. ಈ ಸಂಬಂಧ ಹೆಚ್ಚಿನ ಜಾಗೃತಿ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು. 

ಸಭೆಯ ಕೊನೆಯಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡುವ ಸಂಬಂಧ ಸಂಘ ಸಂಸ್ಥೆಗಳ ಪ್ರಮುಖರಿಂದ ಅಭಿಪ್ರಾಯ ಪಡೆಯಲಾಯಿತು. ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬು ಕುಮಾರ್ ಅವರು ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂಬಂಧ ಹಲವು ಸಲಹೆ ನೀಡಿದರು. 

ಕೊನೆಯಲ್ಲಿ ಮಾತನಾಡಿದ ಸಾ.ರಾ.ಮಹೇಶ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತಿವೃಷ್ಟಿ ಎದುರಿಸಲು ಎಲ್ಲಾ ರೀತಿಯ ನೆರವು ನೀಡುತ್ತಿವೆ. ಅದರಂತೆ ಸರ್ಕಾರದ ಆಶಯವನ್ನು ಅರ್ಥ ಮಾಡಿಕೊಂಡು ತಳಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.  

ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಚಾರುತಲಾ ಸೋಮಲ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News