ತುಮಕೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ತುಮಕೂರು,ಆ.29: ಜಿಲ್ಲೆಯಲ್ಲಿ ಆಗಸ್ಟ್ 31ರಂದು ತುಮಕೂರು ಮಹಾನಗರಪಾಲಿಕೆ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ ಹಾಗೂ ಗುಬ್ಬಿ ಪಟ್ಟಣ ಪಂಚಾಯತ್ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ವಯ ತುಮಕೂರು ಮಹಾ ನಗರಪಾಲಿಕೆ ವ್ಯಾಪ್ತಿಯ 35 ವಾರ್ಡ್‍ಗಳಲ್ಲಿ 1,22,368 ಪುರುಷರು, ಮಹಿಳೆಯರು 124209 ಹಾಗೂ ಇತರೆ 27 ಮಂದಿ ಸೇರಿ 246604, ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳ ಪೈಕಿ 8937 ಪುರುಷರು ಹಾಗೂ 9581 ಮಹಿಳೆಯರು;, ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಲ್ಲಿ 11095 ಪುರುಷರು ಹಾಗೂ 11727 ಮಹಿಳೆಯರು, ಗುಬ್ಬಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 19 ವಾರ್ಡ್‍ಗಳಲ್ಲಿ 7820 ಪುರುಷರು ಹಾಗೂ 8032 ಮಹಿಳೆಯರು ಹಾಗೂ ಕೊರಟಗೆರೆ ಪಟ್ಟಣ ಪಂಚಾಯತ್ ವ್ಯಾಪ್ತಿಯ 15 ವಾರ್ಡ್‍ಗಳಲ್ಲಿ 5955 ಪುರುಷರು ಹಾಗೂ 6641 ಮಹಿಳಾ ಮತದಾರರು ಮತದಾನ ಮಾಡಲು ಅರ್ಹರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಹಾನಗರಪಾಲಿಕೆ, ಚಿಕ್ಕನಾಯಕನಹಳ್ಳಿ, ಮಧುಗಿರಿ, ಗುಬ್ಬಿ ಹಾಗೂ ಕೊರಟಗೆರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮತದಾರರು ಮತದಾನ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ 271 ಮತಗಟ್ಟೆ ಹಾಗೂ ಉಳಿದ ಸ್ಥಳೀಯ ಸಂಸ್ಥೆಗಳ ಆಯಾ ವಾರ್ಡ್‍ಗಳಲ್ಲಿ ತಲಾ 1 ರಂತೆ ಒಟ್ಟು 80 ಮತಗಟ್ಟೆ ಸೇರಿ 351 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕನಾಯಕನಹಳ್ಳಿಯ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮಧುಗಿರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿಯ ತಾಲ್ಲೂಕು ಕಛೇರಿ ಹಾಗೂ ಕೊರಟಗೆರೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಎಣಿಕೆ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಭದ್ರತೆಗಾಗಿ 31 ಪೊಲೀಸ್ ಸಬ್‍ಇನ್ಸ್ ಪೆಕ್ಟರ್, 67 ಹೆಡ್ ಕಾನ್ಸ್ ಟೇಬಲ್, 394 ಪೊಲೀಸ್ ಕಾನ್ಸ್ ಟೇಬಲ್, 222 ಹೋಂಗಾರ್ಡ್ಸ್ ಸಿಬ್ಬಂದಿ, 8 ಡಿಎಆರ್ ಹಾಗೂ 6 ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ 800 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 52 ಅತಿಸೂಕ್ಷ್ಮ, 95 ಸೂಕ್ಷ್ಮ ಹಾಗೂ 124 ಸಾಮಾನ್ಯ ಮತಗಟ್ಟೆಗಳಿವೆ. ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 8 ಅತಿಸೂಕ್ಷ್ಮ, 8 ಸೂಕ್ಷ್ಮ ಹಾಗೂ 7 ಸಾಮಾನ್ಯ, ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 11 ಅತಿಸೂಕ್ಷ್ಮ ಹಾಗೂ 12 ಸೂಕ್ಷ್ಮ, ಗುಬ್ಬಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2 ಅತಿಸೂಕ್ಷ್ಮ, 7 ಸೂಕ್ಷ್ಮ ಹಾಗೂ 10 ಸಾಮಾನ್ಯ ಹಾಗೂ ಕೊರಟಗೆರೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2 ಅತಿಸೂಕ್ಷ್ಮ, 3 ಸೂಕ್ಷ್ಮ ಹಾಗೂ 10 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅಲ್ಲದೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಮತದಾನಕ್ಕೆ 1200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಮಸ್ಟರಿಂಗ್ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.