ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಂಡ್ಯ ಯುವ ಕಾಂಗ್ರೆಸ್‍ನಿಂದ ಜಾಗೃತಿ ಕರಪತ್ರ ಬಿಡುಗಡೆ

Update: 2018-08-29 16:57 GMT

ಮಂಡ್ಯ, ಆ.29: ಕೇಂದ್ರ ಸರಕಾರ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ಎಸಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಎನ್.ಸಂಪಂಗಿ ಆರೋಪಿಸಿದ್ದಾರೆ.

ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ಜಾಗೃತಿಗಾಗಿ ಜಿಲ್ಲಾ ಯುವ ಕಾಂಗ್ರೆಸ್ ಹೊರತಂದಿರುವ ಕರಪತ್ರವನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಗರಣದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗಿಯಾಗಿದ್ದಾರೆಂದು ದೂರಿದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ 500 ಕೋಟಿ ರೂ.ಗೆ ಯುದ್ಧ ವಿಮಾನ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಮೋದಿ ಸರಕಾರ 1,500 ಕೋಟಿ ರೂ. ನೀಡಿ ಖರೀದಿಸಿದೆ ಎಂದು ಅವರು ಹೇಳಿದರು.

ಯುಪಿಎ ಸರಕಾರ ಒಪ್ಪಂದ ಮಾಡಿಕೊಂಡಿದ್ದಕ್ಕಿಂತ ಮೂರು ಪಟ್ಟು ನೀಡಿ ವಿಮಾನ ಖರೀದಿ ಮಾಡಿರುವುದು ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ಭ್ರಷ್ಟಾಚಾರ ನಡೆಯದಿದ್ದರೆ ಖರೀದಿ ವಿವರ ಬಹಿರಂಗಪಡಿಸಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.

ಭ್ರಷ್ಟಾಚಾರ ವಿರೋಧಿ ಎಂದು ಹೇಳುವ ಮೋದಿ ಅವರು ಈ ಹಗರಣದಲ್ಲಿ ಭಾಗಿದಾರನಾಗಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಭಾನಿಗೆ ಖರೀದಿ ಗುತ್ತಿಗೆ ನೀಡಿದ್ದಾರೆ. ಭ್ರಷ್ಟ ಸರಕಾರಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಮುಹಮ್ಮದ್ ಜಬೀವುಲ್ಲಾ ಮಾತನಾಡಿ, ಕೇಂದ್ರ ಸರಕಾರದ ಹಗರಣಗಳನ್ನು ಯುವ ಕಾಂಗ್ರೆಸ್ ಸಮಿತಿ ಜನರ ಮುಂದೆ ಇಡುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನತೆ ತೀರ್ಮಾನ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸೇವಾದಳ ಅಧ್ಯಕ್ಷ ಬೇಲೂರು ಸೋಮಶೇಖರ್, ಎಂ.ಎಸ್.ಚಿದಂಬರ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್‍ಗೌಡ, ಕಾರ್ಯದರ್ಶಿ ಜಬೀವುಲ್ಲಾ, ಜಮೀರ್, ಶ್ರೀರಂಗಪಟ್ಟಣ ತಾಲೂಕಿನ ಕಾರ್ಯದರ್ಶಿ ಶ್ರೀನಿವಾಸ್ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News