ಶರತ್ತಿಲ್ಲದೆ ಸಾಲಮನ್ನಾ ಮಾಡಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹ

Update: 2018-08-29 17:34 GMT

ಮಡಿಕೇರಿ ಆ.29 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೃಷಿ ಕ್ಷೇತ್ರ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಲ್ಲಿರುವ ಸಂತ್ರಸ್ತರ ಸಾಲವನ್ನು ಯಾವುದೇ ಶರತ್ತಿಲ್ಲದೆ ಮನ್ನಾ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಪ್ರಕೃತಿ ವಿಕೋಪದಿಂದ ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ, ಅಡಿಕೆ, ಶುಂಠಿ ಬೆಳೆ ಸೇರಿದಂತೆ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿದ್ದು, ಜಿಲ್ಲೆಯ ರೈತರ ಹಾಗೂ ಬೆಳೆಗಾರರ ಸಂಕಷ್ಟವನ್ನು ಅರಿತು ಸರಕಾರಗಳು ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು. 

ಹಾನಿಗೀಡಾಗಿರುವ ಗ್ರಾಮಗಳ ಜನರು ತಮ್ಮ ಮೂಲ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ತಾವಿರುವ ಗ್ರಾಮಗಳಲ್ಲೇ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಗ್ರಾಮಸ್ಥರು ತಾವು ಹುಟ್ಟಿ, ಬೆಳೆದ ಪ್ರದೇಶಕ್ಕೇ ಒಗ್ಗಿಕೊಂಡಿರುವುದರಿಂದ ಒತ್ತಾಯ ಪೂರ್ವಕವಾಗಿ ಬೇರೆ ಪ್ರದೇಶಗಳಿಗೆ ಸ್ಥಳಾಂತರಗೊಳಿಸಬಾರದೆಂದು ಜಿಲ್ಲಾಡಳಿತದ ಬಳಿ ಮನವಿ ಮಾಡುವುದಾಗಿ ತಿಳಿಸಿದರು.

ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯ ವರದಿಯನ್ನು ಮುಂದಿನ 10 ದಿನಗಳಲ್ಲಿ ಕೆಪಿಸಿಸಿಗೆ ಸಲ್ಲಿಸಲಾಗುವುದೆಂದು ತಿಳಿಸಿದ ಶಿವುಮಾದಪ್ಪ, ಸಂತ್ರಸ್ತರ ಮಾಹಿತಿ ನೀಡಲು ಜಿಲ್ಲಾಡಳಿತ ಆ.31 ಕೊನೆಯ ದಿನಾಂಕವೆಂದು ತಿಳಿಸಿದ್ದು, ಇನ್ನೂ ಹೆಚ್ಚುವರಿ 15 ದಿನಗಳ ಕಲಾವಕಾಶವನ್ನು ನೀಡಬೇಕೆಂದರು. 

ಜಿಲ್ಲೆಯಲ್ಲಿ ಭೌಗೋಳಿಕವಾಗಿ ಸುರಕ್ಷಿತವಲ್ಲದ ಪ್ರದೇಶಗಳಾದ ನದಿ, ಬೆಟ್ಟ, ಗುಡ್ಡಗಳಲ್ಲಿರುವ ಅಪಾಯದಂಚಿನ ಮನೆಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಮನೆ ಹಾಗೂ ಕೃಷಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನಿಗಧಿ ಮಾಡಬೇಕೆಂದು ಶಿವುಮಾದಪ್ಪ ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಸದಾ ನೊಂದವರ ಜೊತೆಯಲ್ಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಪ್ರಮುಖರಾದ ಕೆ.ಕೆ.ಮಂಜುನಾಥ್ ಕುಮಾರ್, ಕೆ.ಪಿ.ಚಂದ್ರಕಲಾ, ಟಿ.ಪಿ. ರಮೇಶ್, ರಾಜೀವ್ ಗಾಂಧಿ ಪಂಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಮತ್ತಿತರರು ಈ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News