ನೊಂದವರಿಗೆ ಸಾಂತ್ವನ ಹೇಳಿದ ನಟಿ ರಶ್ಮಿಕಾ: ತಲಾ 10 ಸಾವಿರ ರೂ.ಗಳಂತೆ 31 ಸಂತ್ರಸ್ತರಿಗೆ ಧನ ಸಹಾಯ

Update: 2018-08-29 17:35 GMT

ಮಡಿಕೇರಿ, ಆ.29: ಖ್ಯಾತ ಚಲನಚಿತ್ರ ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಅತಿವೃಷ್ಟಿ ಹಾನಿಯಿಂದ ನೊಂದವರಿಗೆ ಸಾಂತ್ವನ ಹೇಳಿದರು. ವಿರಾಜಪೇಟೆಗೆ ಭೇಟಿ ನೀಡಿದ ಅವರು ಸುಮಾರು 31 ಸಂತ್ರಸ್ತರಿಗೆ ತಲಾ 10 ಸಾವಿರ ರೂ.ಗಳಂತೆ ಧನ ಸಹಾಯ ಮಾಡಿದರು. 

ವಿರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ಸಂತ್ರಸ್ತರನ್ನು ಭೇಟಿಯಾದ ರಶ್ಮಿಕಾ ದು:ಖವನ್ನು ಹಂಚಿಕೊಂಡರು. ನಡೆದು ಹೋಗಿರುವ ಅನಾಹುತಕ್ಕೆ ಯಾರೂ ಆತ್ಮಸ್ಥೈರ್ಯ ಕಳೆದು ಕೊಳ್ಳಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ಇದು ನನ್ನ ಮೊದಲ ಹೆಜ್ಜೆಯಾಗಿದ್ದು, ಇನ್ನು ಮುಂದೆಯೂ ಕುಟುಂಬ ಸದಸ್ಯರು ಸೇರಿದಂತೆ ನಾವೆಲ್ಲರೂ ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಮಾತನಾಡಿ ಸಹಾಯ ಹಸ್ತದ ಭರವಸೆ ನೀಡಿದರು. ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಮಕ್ಕಂದೂರಿನ ಸಂತ್ರಸ್ತೆ ಚೆನ್ನಪಂಡ ಕವಿತಾ ಅವರು ಆ.15 ರಿಂದ 17 ರ ವರೆಗೆ ತಾವು ಅನಿಭವಿಸಿದ ಕಷ್ಟದ ಕ್ಷಣಗಳನ್ನು ಹಂಚಿಕೊಂಡರು. ಹೆಬ್ಬೆಟ್ಟಗೇರಿಯ ಗಣಪತಿ ಬಿದ್ದಪ್ಪ, ಚಿಣ್ಣಪ್ಪ, ಕಾಂಡನ ಕೊಲ್ಲಿಯ ಪ್ರೇಮ ಮಾತನಾಡಿದರು.

ವಿರಾಜಪೇಟೆಯ 6, ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ 25 ಸಂತ್ರಸ್ತರು ಸೇರಿ 31 ಮಂದಿಗೆ ತಲಾ 10 ಸಾವಿರ ರೂ.ನಂತೆ ರಶ್ಮಿಕಾ ಮಂದಣ್ಣ ಧನ ಸಹಾಯ ಮಾಡಿದರು. ವಿರಾಜಪೇಟೆ ಆಟೋ ಚಾಲಕರ ಸಂಘದ ಅಧ್ಯಕ್ಷ ಶಶಿಧರನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News