ಅರಸುರವರು ಜಾರಿಗೊಳಿಸಿದ ಮಹತ್ವಪೂರ್ಣ ಯೋಜನೆಗಳು ಎಲ್ಲರಿಗೂ ಸ್ಪೂರ್ತಿದಾಯಕ: ಸುಜಾತಾ ಕೃಷ್ಣಪ್ಪ

Update: 2018-08-29 18:13 GMT

ಚಿಕ್ಕಮಗಳೂರು,ಆ.29: ಸಾಮಾಜಿಕ ಸಮಾನತೆಯ ಹರಿಕಾರ ದೇವರಾಜ ಅರಸುರವರು ತಮ್ಮ ಅಧಿಕಾರವಧಿಯಲ್ಲಿ ಹಿಂದುಳಿದ ಮತ್ತು ಶೋಷಿತ ಜನಸಮುದಾಯದವರಿಗೆ ಜಾರಿಗೊಳಿಸಿರುವ ಮಹತ್ವಪೂರ್ಣ ಯೋಜನೆಗಳು ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರಾಜ ಅರಸುರವರ 103ನೇ ಜನ್ಮ ದಿನಾಚರಣೆಯ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಹಿಂದುಳಿಯಲು ಮುಖ್ಯ ಕಾರಣ ಅನಕ್ಷರತೆ, ಬಡತನ. ಇದನ್ನು ಮನಗಂಡ ಡಿ.ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದರು. ಸ್ತ್ರೀಯರಿಗೂ ಕೂಡ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದರು ಎಂದು ಹೇಳಿದ ಅವರು, ಕರ್ನಾಟಕ ಬಹು ಕಾಲ ನೆನಪು ಮಾಡಿಕೊಳ್ಳುವ ಹತ್ತಾರು ಅರ್ಥಪುರ್ಣ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು. 

ಶಾಸಕ ಸಿ.ಟಿ ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯ ನಾಮಕರಣ, ಭೂ ಸುಧಾರಣಾ ಕಾಯ್ದೆ, ಕೃಷಿ ಕಾರ್ಮಿಕರ ಕನಿಷ್ಠ ವೇತನ, ಮಲ ಹೊರುವ ಪದ್ದತಿ ನಿಷೇಧ, ಜೀತ ವಿಮುಕ್ತಿ, ಋಣ ಪರಿಹಾರ, ವೃದ್ದಾಪ್ಯ ವೇತನ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಡಿ.ದೇವರಾಜ ಅರಸು ಅವರು ಜಾರಿಗೊಳಿಸಿದರು ಎಂದರು.

ಜಾತಿ ಬಲ ಇಲ್ಲದಿದ್ದರೆ ಬಹಳ ಕಷ್ಟ. ಅಂದು ಪ್ರಮುಖ ಜಾತಿಯ ಪ್ರಬಲ ಮುಖಂಡರುಗಳಿದ್ದ ಸಂದರ್ಭದಲ್ಲಿ ನೇತೃತ್ವ ವಹಿಸಿ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ರಾಜಕೀಯ ಬಲಾಡ್ಯರನ್ನು ಮಣಿಸಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ. ಅನಂತರ ಈ ರಾಜಕೀಯ ಪ್ರಯೋಗ ನಡೆಯಲಿಲ್ಲ ಎಂದರು.

ಐ.ಡಿ.ಎಸ್.ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಪ್ರೊ. ಕೆ.ಎನ್.ಲಕ್ಷ್ಮೀಕಾಂತ್ ಉಪನ್ಯಾಸ ನೀಡಿ ಮಾತನಾಡಿ, ಡಿ.ದೇವರಾಜ ಅರಸುರವರು ಈ ರಾಜ್ಯ ಕಂಡ ಅಪರೂಪದ ರಾಜಕಾರಣಿ ಪ.ಜಾತಿ ಮತ್ತು ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶಕ್ತಿ ತುಂಬಿದರು. 1971 ರಲ್ಲಿ ವೃಕ್ಷ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಭೂ ಸುಧಾರಣಾ ಮಂಡಳಿಯನ್ನು ರಚಿಸಿದರು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ.ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹಿರಿಗಯ್ಯ, ಜಿ.ಪಂ.ನ ಆರೋಗ್ಯ ಮತ್ತು ಶಿಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತ ಅನಿಲ್‍ ಕುಮಾರ್, ಸದಸ್ಯ ಮಹೇಶ್ ಒಡೆಯರ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮತ್ತಿತರರು ಹಾಜರಿದ್ದರು.

ಜ್ಯೋತಿ ಪ್ರಾರ್ಥಿಸಿದರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಸ್ವಾಗತಿಸಿದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾತಂಡಗಳಿಂದ ಡಿ.ದೇವರಾಜ ಅರಸುರವರ ಭಾವಚಿತ್ರದ ಮೆರವಣಿಗೆ ಎಂ.ಜಿ ರಸ್ತೆ ಮೂಲಕ ಕಲಾಮಂದಿರದ ವರೆಗೆ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News