ಅಘೋಷಿತ ತುರ್ತುಪರಿಸ್ಥಿತಿಯ ಕರಾಳ ಛಾಯೆ

Update: 2018-08-30 05:51 GMT

ಹಿಟ್ಲರ್ ಕಾಲದ ಜರ್ಮನಿಯ ದಿನಗಳು ಭಾರತದಲ್ಲಿ ಮರುಕಳಿಸಿವೆ. ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು ಕವಿ, ಸಾಹಿತಿಗಳು, ವಕೀಲರ ಮೇಲೆ ಫ್ಯಾಶಿಸ್ಟ್ ಪ್ರಭುತ್ವ ಕೆಂಗಣ್ಣು ಬೀರಿದೆ. ಇವರು ಯಾರನ್ನೂ ಕೊಲ್ಲಲಿಲ್ಲ, ಯಾರ ಆಸ್ತಿಯನ್ನೂ ಲಪಟಾಯಿಸಲಿಲ್ಲ, ದನದ ಮಾಂಸ ತಿಂದರೆಂದು ಅಮಾಯಕರನ್ನು ಸಾಯಿಸಲಿಲ್ಲ, ಸಾಯಿಸಿ ಬಂದವರಿಗೆ ಹಾರ ಹಾಕಿ ಸನ್ಮಾನಿಸಲಿಲ್ಲ, ಆದರೆ ದಲಿತರ, ಆದಿವಾಸಿಗಳ, ಮಹಿಳೆಯರ, ಅಲ್ಪಸಂಖ್ಯಾತರ ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ದನಿಯೆತ್ತಿದ್ದೇ ಇವರ ಬಂಧನಕ್ಕೆ ಕಾರಣ. ಮೊನ್ನೆ ಪೊಲೀಸರು ದಿಢೀರನೆ ಕವಿ ವರವರರಾವ್, ಪತ್ರಕರ್ತ ಗೌತಮ್ ನವ್ಲಾಖಾ, ನ್ಯಾಯವಾದಿ ಸುಧಾ ಭಾರದ್ವಾಜ್, ಅರುಣ್ ಫೆರೇರಾ, ವೆರ್ನನ್ ಗೊನ್ಸಾಲ್ವಿಸ್‌ರನ್ನು ಬಂಧಿಸಿದ್ದಾರೆ. ಲೇಖಕ ಆನಂದ ತೇಲ್ತುಂಬ್ಡೆ ಬಂಧನವೂ ಖಚಿತಪಟ್ಟಿದೆ. ಮೋದಿ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಇವರ ತಲೆಗೆ ಕಟ್ಟಿದ್ದಾರೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಆರೋಪಿಗಳು, ಅವರ ಹಿಂದಿರುವ ಸಂಘಟನೆಗಳನ್ನು ಕರ್ನಾಟಕ ಎಸ್‌ಐಟಿ ಬಯಲಿಗೆಳೆಯುತ್ತಿದ್ದಂತೆ ಪ್ರಭುತ್ವ ಈ ಹೊಸ ಶೋಧವನ್ನು ಮಾಡಿದೆ.

ಈಗ ರಾಜಕೀಯ ಪಕ್ಷಗಳು, ಜನಪರ ಸಂಘಟನೆಗಳು ಮಾತಾಡಬೇಕು. ಸುಮ್ಮನಿದ್ದರೆ ಭಾರೀ ಅಪಾಯ ಕಾದಿದೆ. ದಲಿತರು, ಆದಿವಾಸಿಗಳು, ಹಿಂದುಳಿದವರು ಹಾಗೂ ಮಹಿಳೆಯರ ಪರವಾಗಿ ಹೋರಾಡುತ್ತಾ ಅವರ ನೋವಿಗೆ ಸ್ಪಂದಿಸುತ್ತಿದ್ದ ಚಿಂತಕರನ್ನು ಯಾವುದೇ ಖಚಿತ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಿರುವುದು ಖಂಡನೀಯವಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲದ ನಿರ್ಲಜ್ಜ ಸರಕಾರವೊಂದು ಈ ದಮನ ಸತ್ರ ನಡೆಸಿ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ. ದನರಕ್ಷಣೆ ಹೆಸರಿನಲ್ಲಿ ಹಾದಿ ಬೀದಿಗಳಲ್ಲಿ ಅಮಾಯಕ ಜನರನ್ನು ಕೊಲ್ಲುತ್ತ ಬಂದವರನ್ನು ರಕ್ಷಿಸುತ್ತ, ಅವರಿಗೆ ಹೂವಿನ ಮಾಲೆ ಹಾಕಿ ಸನ್ಮಾನಿಸುತ್ತ ಬಂದ ಈ ಪ್ರಭುತ್ವ, ಭಿನ್ನಧ್ವನಿಗಳನ್ನು ಅಡಗಿಸಲು ಈ ಬಂಧನ ಪ್ರಹಸನ ನಡೆಸಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ದೇಶದ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ದಮನಕ್ಕೆ ನಡೆದ ಸಂಚು, ರೋಹಿತ್ ವೇಮುಲಾ ದುರಂತ ಸಾವು, ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ದಮನ ಕಾಂಡ, ಕನ್ಹಯಾ ಕುಮಾರ್, ಉಮರ್ ಖಾಲಿದ್ ಮೇಲೆ ನಡೆದ ಹಲ್ಲೆ, ಇತ್ತೀಚೆಗೆ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ, ಭೀಮಾಕೋರೆಗಾಂವ್‌ನಲ್ಲಿ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಲು ಹೋದ ದಲಿತರ ಮೇಲೆ ನಡೆದ ಹಿಂಸಾಚಾರ, ಅದಕ್ಕೆ ಕಾರಣರಾದವರಿಗೆ ರಕ್ಷಣೆ, ಅಲ್ಲದೆ ಆ ಪ್ರಕರಣದಲ್ಲಿ ಅನವಶ್ಯಕವಾಗಿ ಮಹಾರಾಷ್ಟ್ರದ ಜನಪರ ಹೋರಾಟಗಾರರು ಹಾಗೂ ಚಿಂತಕರಾದ ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ರೋನಾ ವಿಲ್ಸನ್, ಮಹೇಶ ರಾವುತ್ ಮತ್ತು ಮರಾಠಿ ಕವಿ ಸುಧೀರ್ ಡವಳೆ ಅವರನ್ನು ಬಂಧಿಸಲಾಗಿತ್ತು.

ಈಗ ಒಮ್ಮಿಂದೊಮ್ಮೆಲೇ ಆರು ಚಿಂತಕರ ಬಂಧನಕ್ಕೆ ಕಾರಣವೇನು? ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್, ಚಿಂತಕ ಗೋವಿಂದ ಪನ್ಸಾರೆ, ಕರ್ನಾಟಕದ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕದ ಎಸ್‌ಐಟಿಯು ಸನಾತನ ಸಂಸ್ಥೆಗೆ ಸೇರಿದ ಪಾತಕಿಗಳನ್ನು ಬಂಧಿಸಿದ ಆನಂತರ ಮೋದಿ ಸರಕಾರ ಜನರ ಗಮನವನ್ನು ಬೇರೆಡೆ ಸೆಳೆಯಲು ಮಂಗಳವಾರ ಈ ಬಂಧನ ಸತ್ರ ನಡೆಸಿತೇ ಎಂಬ ಸಂದೇಹ ಬರುತ್ತದೆ. ಮೋದಿ ಸರಕಾರ ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಸಂಚಿನ ಕತೆ ಹೆಣೆದಂತೆ ಕಾಣುತ್ತದೆ. ಅದೇನೇ ಇರಲಿ, ಮಾನವ ಹಕ್ಕು ಹೋರಾಟಗಾರರ ಈ ಬಂಧನ ಖಂಡನೀಯವಾಗಿದೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕಾಗಿದೆ.

ಈ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಕೊಳ್ಳೆ ಹೊಡೆದು ಕೋಟ್ಯಂತರ ರೂ. ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದ ನೀರವ್ ಮೋದಿ, ವಿಜಯ ಮಲ್ಯ ಮುಂತಾದ ಕಾರ್ಪೊರೇಟ್ ಉದ್ಯಮಪತಿಗಳು ಅಲ್ಲಿ ಸುಖವಾಗಿದ್ದಾರೆ. ಆದರೆ ಈ ದೇಶದಲ್ಲಿ ಯಾರಿಗೂ ವಂಚನೆ ಮಾಡದ, ಯಾವ ಕೊಲೆ ಆರೋಪವೂ ಇಲ್ಲದ ಹೆಸರಾಂತ ಕವಿಗಳು, ವಕೀಲರಾದ ಭಾರದ್ವಾಜ್, ವರವರರಾವ್, ಆನಂದ ತೇಲ್ತುಂಬ್ಡೆ ಮುಂತಾದವರನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಿರುವುದು ಖಂಡನೀಯವಾಗಿದೆ. ಆದಿವಾಸಿಗಳ ಹಿತರಕ್ಷಣೆಗಾಗಿ ಹೋರಾಡುತ್ತ ಬಂದ ಸುಧಾ ಭಾರದ್ವಾಜ್‌ರವರು ಶಂಕರ್ ಗುವಾ ನಿವೋಜಿ ಅವರು ಸ್ಥಾಪಿಸಿದ ಛತ್ತೀಸ್‌ಗಡ ಮುಕ್ತಿ ಮೋರ್ಚಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2000ನೇ ಇಸವಿಯಿಂದ ಅವರು ವಕೀಲ ವೃತ್ತಿಯನ್ನು ಆರಂಭಿಸಿದರು. ಆಗಿನಿಂದಲೂ ರೈತರು, ಆದಿವಾಸಿಗಳು, ಕಾರ್ಮಿಕರು ಹಾಗೂ ಬಡವರ ಅರಣ್ಯ ಹಕ್ಕು, ಪರಿಸರ ಹಕ್ಕಿಗೆ ಸಂಬಂಧಿಸಿದಂತೆ ಹೋರಾಡುತ್ತಾ ಬಂದಿದ್ದ್ದಾರೆ. ಆದಿವಾಸಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಹೈಕೋರ್ಟ್ ಕೂಡ ಅವರಿಗೆ ಅವಕಾಶ ನೀಡಿದೆ. ಸುಧಾ ಭಾರದ್ವಾಜ್ ದಿಲ್ಲಿಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ಮಾನವಹಕ್ಕುಗಳ ಹೋರಾಟಗಾರರ ಮೇಲಿನ ದಾಳಿಯ ಉದ್ದೇಶ ಸ್ಟಷ್ಟವಾಗಿದೆ. ದೇಶದ ಬೇರೆ ಬೇರೆ ಕಡೆ ಪೊಲೀಸರು ನಡೆಸಿರುವ ಈ ಕೃತ್ಯಕ್ಕೆ ಗುರಿಯಾದ ಹೋರಾಟಗಾರರೆಲ್ಲ ನಿರಂತರವಾಗಿ ಅತ್ಯಂತ ಬಡವರು ಹಾಗೂ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟವರ ಪರವಾಗಿ ಹೋರಾಡಿದವರಾಗಿದ್ದಾರೆ. ಇವರು ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂತಹವರ ಬಂಧನ ಖಂಡನೀಯವಾಗಿದೆ. ಈಗ ಬಂಧಿಸಲ್ಪಟ್ಟಿರುವ ಗೌತಮ್ ನವ್ಲಾಖಾ ಅವರು ಹೆಸರಾಂತ ಪತ್ರಕರ್ತರಾಗಿದ್ದಾರೆ. ಇತ್ತೀಚೆಗೆ ಮೋದಿ ಸರಕಾರದ ರಫೇಲ್ ವಿಮಾನ ಹಗರಣವನ್ನು ಅವರು ಬಯಲಿಗೆಳೆದಿದ್ದಾರೆ. ಇಂತಹವರನ್ನು ಗುರಿಯಾಗಿರಿಸಿಕೊಂಡು ಬಂಧನ ಮಾಡಿರುವುದು ಖಂಡನೀಯವಾಗಿದೆ.

ಪ್ರಜಾಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ ನಿರಂತರವಾಗಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರನ್ನು ಅರ್ಬನ್ ನಕ್ಸಲರೆಂದು ಹಣೆಪಟ್ಟಿ ಕಟ್ಟಿ ಅಪರಾಧಿಯನ್ನಾಗಿಸುತ್ತಿರುವ ಕ್ರಮ ಖಂಡನೀಯವಾಗಿದೆ. ಪ್ರಜಾಪ್ರಭುತ್ವವಾದಿಗಳು ಇದನ್ನು ವಿರೋಧಿಸಬೇಕಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಿನ್ನ ಮತವನ್ನು ಅದು ಹತ್ತಿಕ್ಕುತ್ತಲೇ ಬಂದಿದೆ. ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿರುವ ಈ ಸರಕಾರ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆದಿವಾಸಿಗಳನ್ನು ಮತ್ತು ದಲಿತರನ್ನು ಗುರಿಯಾಗಿರಿಸಿಕೊಂಡು ದಮನಕಾಂಡ ನಡೆಸಿದೆ.

ಜಾತ್ಯತೀತ ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಸಂಘಪರಿವಾರದ ರಹಸ್ಯ ಕಾರ್ಯಸೂಚಿಯ ಜಾರಿಗಾಗಿ ಈ ಸರಕಾರ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನ ಮಾಡುತ್ತಿದೆ. ಪ್ರಜ್ಞಾವಂತರೆಲ್ಲ ಇದನ್ನು ವಿರೋಧಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News