ಹನಿಮೂನ್ ಪಿರಿಯೇಡ್ ಮುಗಿದಿದೆ; ಇನ್ನೇನಿದ್ದರೂ ಅಭಿವೃದ್ಧಿ ಮಾತ್ರ: ಸಿಎಂ

Update: 2018-08-30 14:28 GMT

ಹೊಸದಿಲ್ಲಿ/ಬೆಂಗಳೂರು, ಆ.30: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿ ಮಾಡಲು ಆದಷ್ಟು ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿರುವ ರಾಹುಲ್‌ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರಕಾರ ನಡೆಸಲು ಸಂಪೂರ್ಣ ಸಹಕಾರ ನೀಡಿದಕ್ಕಾಗಿ ಇದೇ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಸರಕಾರದ ಆಡಳಿತ ಮತ್ತಷ್ಟು ಚುರುಕುಗೊಳಿಸಲು ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಚರ್ಚೆ ನಡೆಸಿದರು.

ರಾಹುಲ್‌ಗಾಂಧಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರಕಾರದ ನಡವಳಿಕೆ ಹಾಗೂ ರಾಜ್ಯದ ಪ್ರತಿಯೊಂದು ಭಾಗದಲ್ಲೂ ಜನತೆಯ ವಿಶ್ವಾಸಗಳಿಸಲು ಒಂದು ತಂಡವಾಗಿ ಎರಡೂ ಪಕ್ಷಗಳ ನಾಯಕರು ಶ್ರಮಿಸುತ್ತಿದ್ದೇವೆ ಎಂದರು.

ಈ ನೂರು ದಿನಗಳಲ್ಲಿ ಮೈತ್ರಿ ಸರಕಾರದ ಮುಂದಿನ ಕಾರ್ಯಕ್ರಮಗಳು ಹಾಗೂ ದೂರದೃಷ್ಟಿ ಅನುಷ್ಠಾನಕ್ಕೆ ತರಲು ವೇದಿಕೆ ಸೃಷ್ಟಿ ಮಾಡಿದ್ದೇವೆ. ನಾವು ಒಂದು ವರ್ಷದ ಹನಿಮೂನ್ ಪೀರಿಯಡ್ ಕೇಳುತ್ತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ತಯಾರು ಮಾಡಿರುವ ನೀಲಿನಕ್ಷೆ ಜಾರಿಗೆ ತರಲು ಸಮಯ ವ್ಯರ್ಥ ಮಾಡದೆ ಸೆಪ್ಟಂಬರ್ ತಿಂಗಳಿನಿಂದಲೆ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಹುಲ್‌ಗಾಂಧಿ ಜೊತೆ ಇದೊಂದು ಸೌಹಾರ್ದಯುತ ಭೇಟಿ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿಗೆ ತೀರ್ಮಾನ ಕೈಗೊಳ್ಳಲು ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನುಳಿದಂತೆ ಬೇರೆ ಯಾವ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನಾಯಕತ್ವದ ರಕ್ಷಣೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ನಾಯಕರು. ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಅವರು ಬಯಕೆ ವ್ಯಕ್ತಪಡಿಸಿದರೆ ತಪ್ಪೇನು? ಮುಂದಿನ ಚುನಾವಣೆಯಲ್ಲಿ ಜನತೆ ಅಪೇಕ್ಷೆ ಪಟ್ಟು, ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಈಗಾಗಲೆ ಸ್ಪಷ್ಟಣೆಯನ್ನೂ ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಇಲ್ಲಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನನಗಿಂತ ಹಿರಿಯರು. ಅವರು ಮುಖ್ಯಮಂತ್ರಿಯಾಗಬೇಕೆಂಬ ಬಯಕೆ ಕೆಲವರಲ್ಲಿ ಇರುತ್ತದೆ. ಅದನ್ನೇ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರೆ ಏನು ಮಾಡುವುದು. ಈ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಈ ಸರಕಾರಕ್ಕೆ ರಕ್ಷಣೆ ಇರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮನ್ವಯ ಸಮಿತಿಯಲ್ಲಿ ಯಾರನ್ನು ಸೇರಿಸಬೇಕು, ಯಾರನ್ನು ತೆಗೆಯಬೇಕು ಎಂಬುದರ ಕುರಿತು ರಾಹುಲ್‌ಗಾಂಧಿ ಭೇಟಿ ವೇಳೆ ಚರ್ಚೆ ಮಾಡಿಲ್ಲ. ಅದನ್ನು ಎರಡು ಪಕ್ಷದ ಮುಖಂಡರು ಕೂತು ಮಾತುಕತೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಹುಲ್‌ಗಾಂಧಿ ಭೇಟಿ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ, ಸಚಿವ ಬಂಡೆಪ್ಪ ಕಾಶೆಂಪೂರ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News