ಅವೈಜ್ಞಾನಿಕ ಆರ್.ಯು.ಬಿ/ ಆರ್‍ಓಬಿ/ ಸಬ್‍ವೇಗಳಾಗದಂತೆ ಎಚ್ಚರ ವಹಿಸಿ: ಸಂಸದ ಜಿ.ಎಂ.ಸಿದ್ದೇಶ್ವರ

Update: 2018-08-30 13:16 GMT

ದಾವಣಗೆರೆ,ಆ.30: ಅವೈಜ್ಞಾನಿಕ ಆರ್.ಯು.ಬಿ/ಆರ್‍ಓಬಿ/ಸಬ್‍ವೇಗಳಾಗದಂತೆ ಎಚ್ಚರ ವಹಿಸಿ, ಎಲ್ಲರ ಹಿತದೃಷ್ಟಿ ಹಾಗೂ ದೂರದೃಷ್ಟಿಯಿಂದ ರೈಲ್ವೆ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದರು.

ಹರಿಹರ ನಗರದ ಅಮರಾವತಿ ಕಾಲೋನಿ ರೈಲ್ವೆ ಫ್ಲೈ ಓವರ್, ದಾವಣಗೆರೆ ರೈಲ್ವೆ ನಿಲ್ದಾಣ, ದಾವಣಗೆರೆಯ ಎ.ಪಿ.ಎಂ.ಸಿ ಬಳಿಯ ಫ್ಲೈ ಓವರ್ ಮತ್ತು ಡಿ.ಸಿ.ಎಂ. ಟೌನ್ ಶಿಪ್ ಆರ್‍ಯುಬಿ ಕಾಮಗಾರಿಗಳ ವೀಕ್ಷಣೆ ಬಳಿಕ ಜಿ.ಎಂ.ಐ.ಟಿ ಅಥಿತಿ ಗೃಹದಲ್ಲಿ ಮೈಸೂರು ಡಿ.ಆರ್.ಎಂ. ಹಾಗೂ ಇತರೆ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

'ಈಗಿರುವ ದಾವಣಗೆರೆ ರೈಲ್ವೆ ನಿಲ್ದಾಣವನ್ನು 1937 ರಲ್ಲಿ ನಿರ್ಮಿಸಲಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಹಾಗೂ ರೈಲ್ವೆ ಪ್ಲಾಟ್‍ಫಾರ್ಮ್ ನಿಲ್ದಾಣದ ಕಟ್ಟಡಕ್ಕಿಂತ ಎತ್ತರವಾಗಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವಾಗಿದೆ. ಹೊಸ ರೈಲ್ವೇ ನಿಲ್ದಾಣಕ್ಕಾಗಿ ಸಾಕಷ್ಟು ಒತ್ತಾಯದ ನಂತರ ಹುಬ್ಬಳ್ಳಿ ಜನರಲ್ ಮ್ಯಾನೇಜರ್ ಚಿಕ್ಕಜಾಜೂರು-ಹುಬ್ಬಳ್ಳಿ ಡಬ್ಲಿಂಗ್ ಯೋಜನೆಯಡಿ ಹೊಸ ರೈಲ್ವೇ ಸ್ಟೇಷನ್ ಕಟ್ಟಡ ಕಾಮಗಾರಿ ತೆಗೆದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ. ಅದರಂತೆ ರೈಲ್ವೇ ಇಂಜಿನಿಯರ್‍ಗಳು 11 ಕೋಟಿ ರೂ. ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಈ ಪ್ರಸ್ತಾವನೆಗೆ ಅನುಮೋದನೆ ದೊರಕಿಸಿಕೊಂಡು ಶೀಘ್ರ ಹೊಸ ಸ್ಟೇಷನ್ ಕಾಮಗಾರಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ ಪ್ರತಿಕ್ರಿಯಿಸಿ, ಸಂಪೂರ್ಣ ಹೊಸ ಸ್ಟೇಷನ್ ಕಟ್ಟಡದ ಬದಲಾಗಿ ನವೀಕರಿಸಿಕೊಡಲಾಗುವುದು ಎಂದರು. ಸಂಸದರು ಪ್ರಸ್ತುತ ತಯಾರಿಸಿರುವ ಪ್ರಸ್ತಾವನೆಯನ್ನು ಶಿಫಾರಸು ಮಾಡಲು ತಿಳಿಸಿದ ಬಳಿಕ, ತಾವು ಸರ್ಕಾರಕ್ಕೆ ಈ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ ಎಂದರು.

ಡಿಸಿಎಂ ಟೌನ್‍ಶಿಪ್ ಬಳಿಯ ಎಲ್‍ಸಿ ಸಂಖ್ಯೆ 197 ರಲ್ಲಿರುವ ಆರ್‍ಯುಬಿ ಇಲ್ಲಿ ಡಬ್ಲಿಂಗ್ ಯೋಜನೆಯಡಿ ಕೆಳ ಸೇತುವೆಗೆ ಹಳೇ ಲೈನನ್ನೂ ಸೇರಿ 61 ಮೀಟರ್‍ಗೆ ವಿಸ್ತರಣೆ ಮಾಡಿ, ಸೇತುವೆ ನೇರ ಮಾಡಿಕೊಡಬೇಕೆಂದು ಸೂಚಿಸಿದರು. ಹಾಗೂ ಸೇತುವೆ ಕೆಳಗೆ ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲ. ನೀರು ಜಾಮ್ ಆಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯಪ್ರಸಾದ್ ಮಾತನಾಡಿ, ಡ್ರೈನೇಜ್ ಬ್ಲಾಕ್ ಆಗಿರುವುದು ರೇಲ್ವೇ ಇಲಾಖೆಯಿಂದ ಅಲ್ಲ. ಬೇರೆ ಇಲಾಖೆಗಳ ಕಾಮಗಾರಿ ವೇಳೆ ಈ ರೀತಿ ಆಗಿದೆ ಎಂದರು. ಸಂಸದರು ಪ್ರತಿಕ್ರಿಯಿಸಿ, ರೈಲ್ವೇ ಇಲಾಖೆಯದ್ದೇ ಸಂಪೂರ್ಣ ಕಾಂಟ್ರಾಕ್ಟ್ ಇರುವುದರಿಂದ ಶೀಘ್ರವಾಗಿ ಸರಿಪಡಿಸುವಂತೆ ಸೂಚಿಸಿದರು.

ಹನುಮನಹಳ್ಳಿ ಬಳಿಯ ಎಲ್‍ಸಿ ಸಂಖ್ಯೆ 190 ರಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿರುವ ಆರ್‍ಯುಬಿ ಯನ್ನು ಅಲ್ಲಿನ ಗ್ರಾಮಸ್ಥರು ವಿರೋಧಿಸಿ ಮೊದಲಿನ ಎಲ್‍ಸಿ ಯನ್ನೇ ಉಳಿಸಿಕೊಡಬೇಕು. ಆರ್‍ಯುಬಿ ಅಥವಾ ಆರ್‍ಓಬಿ ಯನ್ನು ನಿರ್ಮಿಸಿದರೆ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆಯಾಗುವ ಹಿನ್ನೆಲೆಯಲ್ಲಿ ಎಲ್‍ಸಿಯನ್ನೇ ಉಳಿಸಿಕೊಡಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಸಂಬಂಧಿಸಿದ ರೈಲ್ವೇ ಅಭಿಯಂತರರು ಪ್ರಸ್ತುತ ನಿಯಮಾನುಸಾರ ದೇಶಾದ್ಯಂತ ಎಲ್ಲೂ ಎಲ್‍ಸಿ ಇರಬಾರದು. ಇದರಿಂದಾಗುವ ಅವಘಡಗಳನ್ನು ತಪ್ಪಿಸಲು 2020 ರ ಹೊತ್ತಿಗೆ ಎಲ್ಲ ಎಲ್‍ಸಿಗಳನ್ನು ಆರ್‍ಓಬಿ, ಆಯುಬಿ ಅಥವಾ ಸಬ್‍ವೇಗಳನ್ನಾಗಿ ಪರಿವರ್ತಿಸಲು ಆದೇಶಿಸಲಾದ ಪ್ರಕಾರ ಎಲ್‍ಸಿ ಯನ್ನು ಉಳಿಸಲು ಸಾಧ್ಯವಿಲ್ಲವೆಂದರು. ಸಂಸದರು ಇದಕ್ಕೆ ಪ್ರತಿಕ್ರಿಯಿ, ನಿಯಮದ ವಿರುದ್ಧ ಪಟ್ಟು ಹಿಡಿದು ಕೂತರೆ ಆಗದು. ಗ್ರಾಮಸ್ಥರು ಮತ್ತು ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅನುಕೂಲವಾಗುಂತೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ ಗ್ರಾಮಸ್ಥರೊಂದಿಗೆ ದಿನಾಂಕ ನಿಗದಿಗೊಳಿಸಿಕೊಂಡು ಸ್ಥಳ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹರಿಹರದ ಅಮರಾವತಿ ಬಳಿಯ ಎಲ್‍ಸಿ ಸಂಖ್ಯೆ 208 ರಲ್ಲಿ ಜುಲೈ ಅಂತ್ಯಕ್ಕೆ ಸರ್ವಿಸ್ ರಸ್ತೆ ಹಾಗೂ ಜನವರಿ 2019 ಕ್ಕೆ ಮೇಲುಸೇತುವೆ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಆದರೆ ಇದುವರೆಗೆ ಭೂಸ್ವಾಧೀನ ಕಾರ್ಯ ಆಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಭೂಸ್ವಾಧೀನ ಪ್ರಕ್ರಿಯೆ ಮುಗಿಯುವುದರೊಳಗೆ ಅಲ್ಲಿ ಸ್ಥಿತಿ ಹದಗಟ್ಟರೆ ರೈಲ್ವೇಯವರು ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಿದರು.

ಎಪಿಎಂಸಿ ಬಳಿಯಿರುವ ಎಲ್‍ಸಿ 198 ರ ಸಬ್‍ವೇ ಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಅಪ್ರೋಚ್ ರಸ್ತೆ ಸರಿಯಾಗಿಲ್ಲ, ಭೂಸ್ವಾಧೀನದ ಸಮಸ್ಯೆಯಿದೆ ಎಂದು ರೈಲ್ವೇ ಇಂಜಿನಿಯರ್ಸ್ ಹೇಳುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೇ ಸಬ್‍ವೇ ಯಾಕೆ ನಿರ್ಮಿಸಬೇಕಿತ್ತು? ಸ್ವಲ್ಪ ಮಳೆಯಾದರೂ ನೀರು ಜಮೆಯಾಗುತ್ತದೆ, ನೀರು ಹರಿದುಹೋಗಲು ಕೇವಲ 2 ಇಂಚಿನ ಪೈಪನ್ನು ಬಳಸಲಾಗಿದೆ, ಇಂತಹ ಕಾಮಗಾರಿ ಯಾಕೆ ಮಾಡಬೇಕೆಂದರು.

ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ, ಇದನ್ನು ಪರಿಶೀಲಿಸಿ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೊಟ್ಟೂರು-ಹೊಸಪೇಟೆ ರೇಲ್ವೆಯನ್ನು ವಿಸ್ತರಿಸಿದರೆ ಅನುಕೂಲವಾಗುತ್ತದೆ. ಸಾರ್ವಜನಿಕರು ಕೊಟ್ಟೂರು-ಹೊಸಪೇಟೆ ರೈಲ್ವೆ ವಿಸ್ತರಣೆಗೆ ಒತ್ತಾಯಿಸುತ್ತಿದ್ದು, ಇಲ್ಲಿ ಈಗಾಗಲೇ ಟ್ರಾಕ್ ಹಾಗೂ ಎಲ್ಲ ವ್ಯವಸ್ಥೆ ಇದ್ದು, ರೈಲ್ವೆ ವಿಸ್ತರಣೆ ಮಾಡಿಕೊಡಬೇಕೆಂದರು. ಹಾಗೂ ತೆಲಗಿ ಮತ್ತು ಹರಪನಹಳ್ಳಿ ರೈಲ್ವೇ ನಿಲ್ದಾಣಗಳಲ್ಲಿ ಸ್ವಚ್ಚತೆ ನಿರ್ವಹಣೆ ತೀರಾ ಹದಗೆಟ್ಟಿದ್ದು, ಉತ್ತಮವಾಗಿ ಸ್ವಚ್ಚತೆಯನ್ನು ನಿರ್ವಹಿಸಬೇಕೆಂದು ಸೂಚಿಸಿದರಲ್ಲದೇ ಅವೈಜ್ಞಾನಿಕ ಆರ್‍ಯುಬಿ/ಆರ್‍ಓಬಿ ಗಳ ಕಡೆ ಹೆಚ್ಚಿನ ಗಮನ ಹರಿಸಿ ದೂರದೃಷ್ಟಿಯಿಂದ ಕಾಮಗಾರಿ ನಿರ್ವಹಿಸಬೇಕೆಂದ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೇ ಕಾಮಗಾರಿಗಳನ್ನು ಗುಣಮಟ್ಟದಿಂದ ತ್ವರಿತಗತಿಯಲ್ಲಿ ಮಾಡಬೇಕೆಂದರು.

ಸಭೆಯಲ್ಲಿ ನೈರುತ್ಯ ವಲಯದ ಉಪ ಮುಖ್ಯ ಅಭಿಯಂತರ ಅಲೋಕ್ ತಿವಾರಿ, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ಮುಖ್ಯಸ್ಥರು, ಇಂಜಿನಿಯರುಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News