ಭೂಗರ್ಭದಿಂದ ನಿಗೂಢ ಸ್ಫೋಟದ ಶಬ್ದ: ಅಗತ್ಯವಿದ್ದಲ್ಲಿ ನಿವಾಸಿಗಳ ಸ್ಥಳಾಂತರಕ್ಕೆ ಸಿದ್ಧ; ಶಾಸಕ ರಾಜೇಗೌಡ

Update: 2018-08-30 13:44 GMT

ಕೊಪ್ಪ, ಆ.30: ತಾಲೂಕಿನ ಮೇಗುಂದ ಹೋಬಳಿಯ ಅಬ್ಬಿಕಲ್ಲಿನಲ್ಲಿ ಕಳೆದ ಕೆಲ ದಿನಗಳಿಂದ ಭೂಗರ್ಭದಿಂದ ನಿಗೂಢ ಸ್ಫೋಟದ ಶಬ್ದ ಕೇಳಿಬರುತ್ತಿದ್ದು, ಆ ಭಾಗದ ಜನತೆ ಆತಂಕದಲ್ಲಿದ್ದಾರೆ. ಅಗತ್ಯಬಿದ್ದರೆ ಜನರನ್ನು ಅಲ್ಲಿಂದ ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ.    

ಕೊಪ್ಪ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತ್ ಮುಂದೂಡಿದ ಕೆಡಿಪಿ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು ಸ್ಫೋಟದ ತೀವ್ರತೆಯಿಂದ ಅಬ್ಬಿಕಲ್ಲು ಕೇಂದ್ರಿತವಾಗಿ ಸುತ್ತಲಿನ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಅದುರುತ್ತಿದೆ. ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲಲ್ಲಿ ಗುಡ್ಡಗಳು ಜರಿದಿವೆ. ರಸ್ತೆಗಳು ಕುಸಿದಿವೆ. ಚೆನ್ನೆಕಲ್ಲು ಸಮೀಪ 150 ಅಡಿ ಉದ್ದಕ್ಕೆ ಭೂಕುಸಿತ ಉಂಟಾಗಿದೆ. ಪ್ರತಿನಿತ್ಯ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಜನತೆ ಮನೆಯೊಳಗೆ ಇರಲು ಹೆದರುತ್ತಿದ್ದಾರೆ. ಮಾದ್ಯಮಗಳಲ್ಲಿ ಈ ಬಗ್ಗೆ ದಿನನಿತ್ಯ ವರದಿಗಳು ಬರುತ್ತಿವೆ. ಈಗಾಗಲೇ ಜಿಲ್ಲಾ ಹಾಗೂ ರಾಜ್ಯದ ಭೂಗರ್ಭ ವಿಜ್ಞಾನಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ಶಬ್ದ ಮರುಕಳಿಸುತ್ತಿರುವುದರಿಂದ ಈ ದಿನ ಮತ್ತೆ ವಿಜ್ಞಾನಿಗಳ ತಂಡ ಬಂದು ಪರಿಶೀಲನೆ ನಡೆಸಲಿದ್ದಾರೆ. ಕೇಂದ್ರದಿಂದಲೂ ವಿಜ್ಞಾನಿಗಳ ತಂಡ ಬಂದು ಪರಿಶೀಲನೆ ನಡೆಸಲಿದೆ. ಆತಂಕದಲ್ಲಿರುವ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ವಿಪರೀತ ಮಳೆಯಿಂದ ಈ ವರ್ಷ ತಾಲೂಕಿನಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಮನುಷ್ಯರ ಮತ್ತು ಪ್ರಾಣಿಗಳ ಜೀವಹಾನಿ ಹಾಗೂ ಮನೆಗಳಿಗೆ ಹಾನಿಯಾದ ಪ್ರಕರಣಗಳಲ್ಲಿ ತಕ್ಷಣ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ತಹಶೀಲ್ದಾರ್ ಬಳಿ ರೂ. 50 ಲಕ್ಷ ಹಣವನ್ನು ಮೀಸಲಿರಿಸಿದೆ. ರಸ್ತೆ, ತೋಟ ಹಾಗೂ ಬೆಳೆಹಾನಿಯಾದ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು ಹಾನಿಯ ಪ್ರಮಾಣದ ಮೇಲೆ ಪರಿಹಾರ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭ ವಿಚಾರ ಪ್ರಸ್ತಾಪಿಸಿದ ಕೆ.ಎಸ್. ರವೀಂದ್ರ ಜಯಪುರ ಮತ್ತು ಬಾಳೆಹೊನ್ನೂರು ಪಟ್ಟಣದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಅತ್ಯಂತ ಕಳಪೆಯಾಗಿದ್ದು, ರಸ್ತೆ ಮಧ್ಯ ನೀರು ನಿಂತಿರುತ್ತದೆ, ಓಡಾಡಲು ಆಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇಲಾಖೆಯ ಅಧಿಕಾರಿಯನ್ನು ಉದ್ದೇಶಿಸಿ ಒಂದು ಕಿ.ಮೀ. ಕಾಂಕ್ರೀಟ್ ರಸ್ತೆಗೆ ರೂ. 1.5 ಕೋಟಿ ಖರ್ಚು ಮಾಡುತ್ತೀರಿ. ಅದು 30 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತೀರಿ. ಕಾಮಗಾರಿ ಮಾಡುವಾಗ ಇಂಜಿನಿಯರುಗಳು ಸ್ಥಳದಲ್ಲಿ ಇರುವುದಿಲ್ಲ. 30 ವರ್ಷ ರಸ್ತೆ 3 ವರ್ಷಕ್ಕೆ ಕೆಟ್ಟುಹೋಗಿದೆ. ಕಾಂಕ್ರೀಟ್ ರಸ್ತೆ ಮಾಡುವ ಉದ್ದೇಶ ಏನು ಎಂದು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರ ಬಾಕಿ ಪಾವತಿಯನ್ನು ತಡೆಹಿಡಿದು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.  

ತಾಲೂಕಿನಲ್ಲಿ ಮರಳು ಮಾಫಿಯಾದಿಂದ ಬಡವರಿಗೆ ಮರಳು ಸಿಗುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್. ರಾಮಸ್ವಾಮಿ ತಿಳಿಸಿದರು. ಮೇಗುಂದ ಹೋಬಳಿಯಲ್ಲಿ ಗಂಧ ಕಳ್ಳರ ಹಾವಳಿ ಜಾಸ್ತಿಯಾಗುತ್ತಿದ್ದು ಅರಣ್ಯ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ಕೆ.ಎಸ್. ರವೀಂದ್ರ ಸಭೆಯ ಗಮನಕ್ಕೆ ತಂದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ದಿನಸಿ, ತರಕಾರಿ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕೆಡಿಪಿ ಸದಸ್ಯ ಡಿ.ಎಸ್. ಸತೀಶ್ ವಿಚಾರ ಪ್ರಸ್ತಾಪಿಸಿದರು. ಪೊಲೀಸ್, ಅರಣ್ಯ ಮತ್ತು ಅಬಕಾರಿ ಇಲಾಖೆಯವರು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಕರಿಮನೆ ಪಿಕಾರ್ಡ್ ಬ್ಯಾಂಕ್‍ನಲ್ಲಿ ಶೇ.20 ವಸೂಲಾತಿ ಮತ್ತು ಕೊಪ್ಪ ಪಿಕಾರ್ಡ್ ಬ್ಯಾಂಕ್‍ನಲ್ಲಿ ಶೇ.9.7 ವಸೂಲಾತಿ ಆಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು. ಈ ರೀತಿ ವಸೂಲಾತಿ ಆದರೆ ಬ್ಯಾಂಕ್‍ಗಳನ್ನು ಮುಚ್ಚಬೇಕಾಗುತ್ತದೆ. ಸಣ್ಣ ಮೊತ್ತದ ಸಾಲಗಾರರು ಪ್ರಾಮಾಣಿಕವಾಗಿ ಪಾವತಿ ಮಾಡುತ್ತಾರೆ. ದೊಡ್ಡ ಮೊತ್ತದ ಸಾಲ ಮಾಡಿದ ಶ್ರೀಮಂತರು ಕಟ್ಟುತ್ತಿಲ್ಲ. ಟಾಪ್ 15 ಸಾಲಗಾರರ ಪಟ್ಟಿ ತಯಾರಿಸಿ ಸಾಲ ವಸೂಲಿಗೆ ಮುಂದಾದರೆ ಅನುಕೂಲವಾಗುತ್ತದೆ ಎಂದು ಎಸ್.ಎನ್. ರಾಮಸ್ವಾಮಿ ತಿಳಿಸಿದರು. 2005ರ ನಂತರ ರೈತರಿಗೆ ಸಂಕಷ್ಟ ಇರಲಿಲ್ಲ. ಈ ಅವಧಿಯಲ್ಲಿ ಸಾಲ ಕಟ್ಟಬಹುದಿತ್ತು. ಈ ವರ್ಷ ಸ್ವಲ್ಪ ತೊಂದರೆಯಾಗಿದೆ. ರೈತರ ಮನವೊಲಿಸಿ ಸಾಲ ವಸೂಲಿಗೆ ಕ್ರಮ ತೆಗೆದುಕೊಳ್ಳಿ ಎಂದರು.

ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ಪ್ರಗತಿ ಪರಿಶೀಲನೆ ಸಂದರ್ಭ ವಿಷಯ ಪ್ರಸ್ತಾಪಿಸಿದ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಜೆ.ಎಸ್. ಲಲಿತಾ, ಮೆಣಸಿನಹಾಡ್ಯದಲ್ಲಿ ಈಗಲೂ 60 ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕೊಳ್ಳಿ ಬೆಳಕಿನಲ್ಲಿ ಜೀವನ ಸಾಗಿಸಬೇಕಿದೆ. ತಿಂಗಳಿಗೆ ಒಂದು ಲೀ. ಸೀಮೆಎಣ್ಣೆ ನೀಡುತ್ತಾರೆ. ಕನಿಷ್ಠ 2 ಲೀ. ಆದರೂ ಕೊಡಿ ಎಂದರು. ಉಳಿದಂತೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ನಾಗರಾಜ್, ತಹಶೀಲ್ದಾರ್ ಟಿ.ಎಸ್. ತನುಜ ಸವದತ್ತಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಸುಬ್ರಹ್ಮಣ್ಯ, ಕೆಡಿಪಿ ಸದಸ್ಯರಾದ ಕೆ. ಆನಂದ್, ಸುಮಿತ್ರಾ ನಾರಾಯಣ್, ಹಂಚಿಕೊಳಲು ದಿನೇಶ್, ಗೋಪಿ ಭಂಡಾರಿ, ಮನ್ಸೂರ್ ಅಲಿ, ಪಿಕಾರ್ಡ್ ಉಪಾಧ್ಯಕ್ಷ ಜೆ.ಎಂ. ಶ್ರೀಹರ್ಷ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಳ್ಗೊಂಡಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News