ಕೊಪ್ಪ: ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೆ ಅಸ್ವಸ್ಥ ನವ ವಿವಾಹಿತೆ ಸಾವು

Update: 2018-08-30 14:38 GMT

ಕೊಪ್ಪ, ಆ.30: ಸುರಿಯುತ್ತಿರುವ ಭಾರೀ ಮಳೆಯಿಂದ ತುಂಬಿ ಹರಿಯುತ್ತಿರುವ ನದಿಯನ್ನು ದಾಟಿ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದೆ ನವ ವಿವಾಹಿತೆಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

ತಾಲೂಕಿನ ಗುಡ್ಡೆತೋಟ ಗ್ರಾ.ಪಂ. ವ್ಯಾಪ್ತಿಯ ಹೂವಿನಗುಂಡಿ ಗಿರಿಜನ ಕಾಲೋನಿಯ ಪುಷ್ಪಲತಾ (24) ಮೃತಪಟ್ಟವರು. ಮೂರು ತಿಂಗಳ ಹಿಂದೆಯಷ್ಟೇ ಪುಷ್ಪಲತಾ ಅವರ ಮದುವೆ ಮೇಗೂರು ನಿವಾಸಿ ಹರೀಶ್ ಎಂಬವರೊಂದಿಗೆ ನಡೆದಿತ್ತು.

ತೀವ್ರ ತಲೆನೋವು ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಪುಷ್ಪಲತಾರನ್ನು ಹೂವಿನಗುಂಡಿ ಗಿರಿಜನ ಕಾಲನಿಯಿಂದ ಮುಖ್ಯ ರಸ್ತೆಗೆ ತಲುಪಿಸಿ, ಅಲ್ಲಿಂದ 8 ಕಿ.ಮೀ. ದೂರದ ಜಯಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಕಾಲನಿ ಮತ್ತು ಮುಖ್ಯ ರಸ್ತೆ ನಡುವಿನ ರಸ್ತೆ ತೀವ್ರ ಹಾಳಾಗಿದ್ದು, ಈ ಭಾಗದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ಇಲ್ಲ. ಕಾಲನಿ ಸಂಪರ್ಕಕ್ಕೆ ದೂರವಾಣಿ ಸೌಲಭ್ಯಗಳೂ ಇಲ್ಲದಿರುವ ಕಾರಣಗಳಿಂದ ಕಾಯಿಲೆ ಪೀಡಿತೆಯನ್ನು ಕುಟುಂಬದವರು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದ್ದು, ನಂತರ ಖಾಸಗಿ ವಾಹನವೊಂದನ್ನು ಗೊತ್ತು ಮಾಡಿಕೊಂಡು ಹರಸಾಹಸಪಟ್ಟು ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ನಡುವೆ ಯುವತಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಬಡ ಕುಟುಂಬಗಳೇ ವಾಸಿಸುವ ಹೂವಿನಗುಂಡಿ ಗಿರಿಜನ ಕಾಲನಿಯು ರಸ್ತೆ ಸೇರಿದಂತೆ ವಿದ್ಯುತ್, ದೂರವಾಣಿ ಮುಂತಾದ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಕಾಲನಿ ನಿವಾಸಿಗಳು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಿನೇ ದಿನೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇಲ್ಲಿನ ಶಾಸಕರು, ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಸೌಲಭ್ಯ ಕಲ್ಪಿಸುವ ಮೂಲಕ ಮುಂದಾಗುವ ಇನ್ನಷ್ಟು ಸಾವು ನೋವುಗಳನ್ನು ತಪ್ಪಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News