ತಾರತಮ್ಯದಿಂದ ಕೂಡಿದ ಭಗವದ್ಗೀತೆ ಪ್ರತಿ ಸುಟ್ಟು ಹಾಕಿದರೆ ತಪ್ಪಿಲ್ಲ: ಪ್ರೊ.ಕೆ.ಎಸ್ ಭಗವಾನ್

Update: 2018-08-30 15:05 GMT

ಮೈಸೂರು,ಆ.30: ದಲಿತರು ತಳವರ್ಗದವರ ಪರ ಧ್ವನಿ ಎತ್ತಿದ ಪ್ರಗತಿಪರ ಚಿಂತಕ ಸಾಹಿತಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಬಂಧನ ಖಂಡನೀಯ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಕಿಡಿಕಾರಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ಹಿಂಸಾ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಐವರು ಪ್ರಗತಿಪರ ಚಿಂತಕರನ್ನು ಬಂಧಿಸಿರುವುದು ದುರದೃಷ್ಟಕರ. ಬಂಧನದ ಮೂಲಕ ನಮ್ಮ ಆಶಯ ಮತ್ತು ಧ್ಯೇಯಗಳನ್ನು ಹತ್ತಿಕ್ಕಬಹುದು ಎಂಬ ಭ್ರಮೆ ಅವರಲ್ಲಿದ್ದರೆ ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಆಂಧ್ರಪ್ರದೇಶದ ಖ್ಯಾತ ಲೇಖಕ, ಪತ್ರಕರ್ತ ವರವರ ರಾವ್, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರಧ್ವಾಜ್, ಅರುಣ್ ಫೆರಾರಿಯ, ಗೌತಮ್ ನಾವಲೇಖ್, ಅರುಣ್ ಗೋನ್ಸ್ಬಾಲೆ ಬಂಧನ ಸರಿಯಲ್ಲ. ಜನಸಾಮಾನ್ಯರ ಪರ ಧ್ವನಿ ಎತ್ತುವವರನ್ನು ನಗರ ನಕ್ಸಲ್ಸ್ ಅನ್ನೋದು ಸರಿಯಲ್ಲ. ಅರ್ಬನ್ ನಕ್ಸಲ್ಸ್ ಅನ್ನೋ ಪದಕ್ಕೆ ಅರ್ಥವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತದ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೀಗೆ ಮಾಡಿಸುತ್ತಿದ್ದಾರೆ. ಪ್ರಗತಿಪರರು ಪ್ರಧಾನಿ ಮೋದಿ ಹತ್ಯೆಗೆ ಪ್ಲಾನ್ ಮಾಡಿದ್ದರು ಎನ್ನುವುದು ಆಧಾರ ರಹಿತ ಆರೋಪ ಎಂದು ಹೇಳಿದರು.

ಪ್ರಧಾನಿಗೆ ಅತ್ಯಂತ ಹೆಚ್ಚಿನ ಭದ್ರತೆ ಇರುತ್ತದೆ. ಅವರ ರಕ್ಷಣೆಗೆ ಗುಪ್ತಚರ ಇಲಾಖೆಯಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹೀಗೆ ಮಾಡುತ್ತಿರುವುದು ವಿಷಾದನೀಯ. ಪ್ರಜಾಪ್ರಭುತ್ವದಲ್ಲಿ ವಿಶ್ಲೇಷಣೆ ಮಾಡುವವರನ್ನು, ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನ ಬಾಹಿರವಾದ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಇನ್ನಾದರೂ ಪ್ರಧಾನಿ ಮೋದಿ ಇದೆಲ್ಲವನ್ನೂ ಬಿಟ್ಟು ಜನರ ಪ್ರಗತಿಗೆ ದುಡಿಯಲಿ ಎಂದಿದ್ದಾರೆ.

ಭಗವದ್ಗೀತೆ ಪ್ರತಿ ಸುಟ್ಟು ಹಾಕುವುದರಲ್ಲಿ ತಪ್ಪಿಲ್ಲ. ಅದು ತಾರತಮ್ಯದಿಂದ ಕೂಡಿದೆ. ಅದನ್ನು ಸುಟ್ಟಿ ಹಾಕಿದ್ದರಲ್ಲಿ ನನಗೆ ತಪ್ಪು ಕಾಣಿಸುತ್ತಿಲ್ಲ. ಆದರೆ ದೇಶದ ಧರ್ಮ ಗ್ರಂಥವಾಗಿರುವ ಸಂವಿಧಾನದ ಪ್ರತಿ ಸುಟ್ಟು ಹಾಕಿದ್ದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಂವಿಧಾನಕ್ಕೆ ಧಕ್ಕೆ ತರುವಂತಹ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟು ಗೋಲು ಹಾಕಿ, ಕಠಿಣವಾದ ಶಿಕ್ಷೆ ನೀಡಬೇಕು ಎಂದು ಪ್ರೊ.ಭಗವಾನ್ ಆಗ್ರಹಿಸಿದರು.

ನಂಜನಗೂಡು ತಾಲೂಕು ಹುಳಿಮಾವು ಗ್ರಾಮದಲ್ಲಿ ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನ್ ರಾಮ್ ರವರ ಪುತ್ಥಳಿಯನ್ನು ವಿರೂಪ ಗೊಳಿಸಿದ್ದಾರೆ. ಆ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News