ಶಾಸಕ ರಾಮದಾಸ್ ಹಾಗೂ ಬೆಂಬಲಿಗರಿಂದ ಹಲ್ಲೆ, ಜೀವ ಬೆದರಿಕೆ: ಪ್ರೇಮಕುಮಾರಿ ಆರೋಪ

Update: 2018-08-30 15:13 GMT

ಮೈಸೂರು,ಆ.30: ತನ್ನ ಹಾಗೂ ಶಾಸಕ ಎಸ್.ಎ. ರಾಮದಾಸ್ ಜೊತೆಗೆ ವೈವಾಹಿಕ ವಿವಾದ ಏರ್ಪಟ್ಟ ಬಳಿಕ ನನ್ನ ಹಾಗೂ ನನ್ನ ಕುಟುಂಬದವರ ಮೇಲೆ ರಾಮದಾಸ್ ಹಾಗೂ ಅವರ ಬೆಂಬಲಿಗರಿಂದ ಹಲ್ಲೆ ಪ್ರಕರಣ ಒಂದೇ ಸಮನೆ ಹೆಚ್ಚುತ್ತಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ಪಾಲಿಕೆ ಚುನಾವಣೆಯ ವಾರ್ಡ್ ಸಂಖ್ಯೆ 57 ರ ಪಕ್ಷೇತರ ಅಭ್ಯರ್ಥಿ ಪ್ರೇಮಾಕುಮಾರಿ ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾನು ಮಹಾನಗರ ಪಾಲಿಕೆ ಚುಣಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಕಳೆದ ಆ.27 ರ ಸಂಜೆ 6.20 ರ ವೇಳೆ ನನ್ನ ತಾಯಿಗೆ ವಾಹನ ಢಿಕ್ಕಿ ಹೊಡೆಸಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಯಾರೂ ತಮಗೆ ರಕ್ಷಣೆ ನೀಡುತ್ತಿಲ್ಲ. ಈ ಹಿಂದೆಯೂ ನನ್ನ ತಾಯಿಯ ಮೇಲೆ ಹಲ್ಲೆ ನಡೆದಿದ್ದು, ಈಗ ವಾಹನ ಢಿಕ್ಕಿ ಹೊಡೆಸಿದ ಕಾರಣ ತೀವ್ರ ಗಾಯಗೊಂಡ ಅವರು ಬಾನವಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ತನ್ನ ಹಾಗೂ ರಾಮದಾಸ್ ನಡುವಿನ ವೈವಾಹಿಕ ವಿವಾದ ನ್ಯಾಯಾಲಯದಲ್ಲಿದ್ದು, ಇದೇ ವೇಳೆ ಕಳೆದ ಚುನಾವಣೆಯಲ್ಲಿ ರಾಮದಾಸ್ ತನ್ನನ್ನು ದೇವಸ್ಥಾನವೊಂದಕ್ಕೆ ಕರೆದೊಯ್ದು ನನ್ನೊಡನೆ ವೈವಾಹಿಕ ಜೀವನ ನಡೆಸುವುದಾಗಿ ಭರವಸೆ ನೀಡಿದ್ದರು. ಈ ಕಾರಣ ನಾಮಪತ್ರವನ್ನೂ ವಾಪಸು ಪಡೆದು ಅವರ ಗೆಲುವಿಗೆ ದಾರಿ ಸುಗಮ ಮಾಡಿಕೊಟ್ಟಿದ್ದರೂ, ತಮ್ಮ ಕುಟುಂಬದವರ ಮೇಲಿನ ಈ ರೀತಿಯ ದೌರ್ಜನ್ಯ ಪ್ರಕರಣ ಮುಂದುವರಿದಿದೆ ಎಂದು ಆರೋಪಿಸಿದರು. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾರೂ ಸೂಕ್ತ ರಕ್ಷಣೆ ಒದಗಿಸದಿರುವುದು ತನಗೆ ಬೇಸರ ತರಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News