ಹನೂರು: ರಸ್ತೆ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ
ಹನೂರು,ಆ.30: ಕಾಮಗಾರಿ ಉತ್ತಮ ಗುಣ ಮಟ್ಟದ್ದಾಗಿರಬೇಕು. ಕಳಪೆ ಎಂದು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರ ಪರವಾನಿಗೆಯನ್ನು ರದ್ದು ಪಡಿಸಲು ಶಿಫಾರಸ್ಸು ಮಾಡಲಾಗುತ್ತದೆ ಎಂದು ಶಾಸಕ. ಆರ್.ನರೇಂದ್ರ ತಿಳಿಸಿದರು.
ಹನೂರು ಸಮೀಪದ ಶಾಗ್ಯ ಗ್ರಾಮದಲ್ಲಿ ಶಾಗ್ಯದಿಂದ ಪುಷ್ಪಾಪುರ ರಸ್ತೆಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ದಿಷ್ಟ ಸಮಯದೊಳಗೆ ಮುಗಿಸಿ ಗುಣಮಟ್ಟ ಕಾಯ್ದಿರಿಸಬೇಕು ಎಂದರು.
ಚಂಗವಾಡಿ ಗ್ರಾಮದಿಂದ ತೋಮೀಯರ್ ಪಾಳ್ಯ ಮಾರ್ಗವಾಗಿ ಶಾಗ್ಯ ಗ್ರಾಮ ಸೇರುವ ರಸ್ತೆ ಅಭಿವೃದ್ದಿ ಹಾಗೂ ಶಾಗ್ಯದಿಂದ ಪುಷ್ಪಪುರವರಗೆ ರಸ್ತೆಯ ಮರು ನಿರ್ಮಾಣ ಮತ್ತು ಸಿಸಿ ಚರಂಡಿ, ಅಡ್ಡಮೋರಿ ಅಭಿವೃದ್ದಿ ಪಡಿಸಲು ಅಂದಾಜು ವೆಚ್ಚ 2 ಕೋಟಿ ರೂ. ಡಾಂಬರೀಕರಣದ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು
ಈ ವೇಳೆ ಜಿ.ಪಂ. ಅಧ್ಯಕ್ಷೆ ಶಿವಮ್ಮ, ಕೃಷ್ಣ, ಸದಸ್ಯೆ ಲೇಖರವಿ, ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಜವಾದ್ ಅಹಮದ್, ಶಾಗ್ಯ ಗ್ರಾ.ಪಂ.ಅಧ್ಯಕ್ಷ ಜಾನ್‍ಪಾಲ್, ಪಿಡಿಒ ರಾಮು, ಮುಖಂಡರಾದ ಪಾಳ್ಯ ಕೃಷ್ಣ, ರವೀಂದ್ರ, ರಾಚಪ್ಪಾಜಿ ಇತರರು ಹಾಜರಿದ್ದರು.