×
Ad

ದಾವಣಗೆರೆ: ಕೇಂದ್ರ ಸರ್ಕಾರದ ವಿರುದ್ಧ ಎನ್‍ಎಸ್‍ಯುಐ ಪ್ರತಿಭಟನೆ; ಮೋದಿ ಪ್ರತಿಕೃತಿ ದಹನ

Update: 2018-08-30 22:46 IST

ದಾವಣಗೆರೆ,ಆ.30: ವಿದೇಶಗಳಿಗೆ ಕೇವಲ 34 ರೂ.ಗೆ ಪೆಟ್ರೋಲ್, 37 ರೂ.ಗೆ ಡೀಸೆಲ್ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಗುರುವಾರ ಎನ್‍ಎಸ್‍ಯುಐ ನಿಂದ ಪ್ರಧಾನಿ ಮೋದಿ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. 

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಂತರ ಜಯದೇವ ವೃತ್ತದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ಅಲಿ ರಹಮತ್ ಪೈಲ್ವಾನ್, ಕೇವಲ 34 ರೂ.ಗೆ ಪೆಟ್ರೋಲ್, 37 ರೂ.ಗಳಿಗೆ ಡೀಸೆಲನ್ನು ವಿದೇಶಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಭಾರತೀಯರಿಗೆ ಶೇ.125ರಿಂದ 150ರಷ್ಟು ಹೆಚ್ಚಿನ ದರಕ್ಕೆ ಅದೇ ಪೆಟ್ರೋಲ್, ಡೀಸೆಲ್ ಮಾರುತ್ತಿರುವುದು ಆರ್‍ಟಿಐನಡಿ ಬೆಳಕಿಗೆ ಬಂದಿದೆ ಎಂದ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿ ಪ್ರಕಾರ ಭಾರತವು 15 ದೇಶಗಳಿಗೆ ಪ್ರತಿ ಲೀಟರ್‍ಗೆ 34 ರೂ.ನಂತೆ ಪೆಟ್ರೋಲ್, 29 ದೇಶಗಳಿಗೆ ಪ್ರತಿ ಲೀಟರ್‍ಗೆ 37ರೂ.ನಂತೆ ಡೀಸೆಲ್ ಮಾರಾಟ ಮಾಡುತ್ತಿದೆ. ಅಧಿಕಾರಕ್ಕೇರುವ ಮುನ್ನ ತೈಲ ಬೆಲೆ ಏರಿಕೆ ವಿರುದ್ಧ ಚೀರಾಡಿದ್ದ, ರಸ್ತೆಗಳಲ್ಲಿ ಪ್ರದರ್ಶನ, ಪ್ರತಿಭಟನೆ ನಾಟಕ ಮಾಡಿದ್ದವರೇ ಇಂದು ಇಂತಹ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. 

ನಮ್ಮ ದೇಶದ ಜನರಿಗೆ ತೈಲದ ಹೊರೆ ಹೊರಿಸುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬರೋಬ್ಬರಿ ಪೆಟ್ರೋಲನ್ನು 15 ದೇಶಕ್ಕೆ, ಡೀಸೆಲನ್ನು 29 ದೇಶಗಳಿಗೆ ಕಡಿಮೆ ಬೆಲೆಗೆ ಮಾರುವ ಮೂಲಕ ದೇಶದ ಜನತೆ ಕಣ್ಣಿಗೆ ಮಣ್ಣೆರಚುತ್ತಿದೆ. ಒಳ್ಳೆಯ ದಿನಗಳನ್ನು ತರುವುದಾಗಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಮೋದಿ ದೇಶ ವಾಸಿಗಳಿಗೆ ದುರ್ದಿನ ತರುತ್ತಿದ್ದಾರೆ ಎಂದು ಅವರು ದೂರಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ನೂರ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಎ.ಎಸ್. ತಾಹೀರ್, ಮಹಮ್ಮದ್ ಮುಜಾಹಿದ್, ಇಮ್ರಾನ್, ಗಿರಿಧರ್, ಮಂಜುನಾಥ, ಶಿವಣ್ಣ, ಶಶಿಧರ್, ಸೈಯದ್ ಉಸ್ಮಾನ್, ಸಾದಿಕ್, ಅಯಾಜ್ ಅಹಮ್ಮದ, ಅಪ್ರೋಜ್, ಬಾಬ್ಜಾನ್, ಇಮ್ರಾನ್ ರಜಾ, ಬಿಲಾಲ್, ಸ್ವಾಮಿ, ಸಿದ್ದೇಶ, ಮನೋಜ್, ಅಯಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News