×
Ad

ಮೈಸೂರು: ಬಾಲಕಿ ಜೊತೆ ಅಸಭ್ಯ ವರ್ತನೆ: ಆರೋಪಿಗೆ ಎರಡು ವರ್ಷ ಜೈಲು

Update: 2018-08-30 23:16 IST

ಮೈಸೂರು,ಆ.30: ಕುಡಿಯುವ ನೀರಿನ ಕ್ಯಾನ್ ಸರಬರಾಜು ಮಾಡಲು ಹೋಗಿ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಮೇಲೆ ಫೋಕ್ಸೋ ನ್ಯಾಯಾಲಯ ಎರಡು ವರ್ಷ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ದಂಡ ವಿಧಿಸಿದೆ.

ಕೆ.ಆರ್.ಪೇಟೆ ತಾಲೂಕಿನ ಗೋವಿಂದನಹಳ್ಳಿಯ ನವೀನ್(22)ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಬಾಲಕಿಯ ತಾಯಿ ಉದ್ಯೋಗದಲ್ಲಿದ್ದು, ಬೆಳಿಗ್ಗೆ ಕೆಲಸಕ್ಕೆ ಹೋದವರು ಸಂಜೆ ಮರಳುತ್ತಿದ್ದರು. ಫೆ.17ರಂದು ಬಾಲಕಿ ಶಾಲೆಗೆ ರಜೆಯಿದ್ದ ಕಾರಣ ಮನೆಯಲ್ಲೇ ಇದ್ದಳು. ಅಂದು ನೀರಿನ ಕ್ಯಾನ್ ಬದಲಿಸಲು ವ್ಯಕ್ತಿ ಮನೆಗೆ ಬಂದಾಗ ಬಾಲಕಿ ಬೇಡ ಎಂದಿದ್ದಾಳೆ. ಇರುವ ನೀರನ್ನು ಚೆಲ್ಲಿ ಕ್ಯಾನ್ ಕೊಡು, ಹೊಸ ನೀರಿನ ಕ್ಯಾನ್ ಕೊಡುತ್ತೇನೆ ಎಂದು ವ್ಯಕ್ತಿ ಹೇಳಿದ್ದು, ಅವಳು ಕ್ಯಾನ್ ತರುವಷ್ಟರಲ್ಲಿ ಈತ ತನ್ನ ಪ್ಯಾಂಟ್ ಕಳಚಿ ವಿಕೃತ ರೂಪ ತೋರಿದ್ದಾನೆ ಎನ್ನಲಾಗಿದೆ. 

ಇದನ್ನು ಕಂಡ ಬಾಲಕಿ ಭಯಗ್ರಸ್ಥಳಾಗಿ ತಕ್ಷಣ ಬಾಗಿಲು ಹಾಕಿ ಕೂಗಾಡಿದ್ದಾಳೆ. ಧ್ವನಿ ಕೇಳಿ ಅಕ್ಕಪಕ್ಕದವರು ಬಂದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ತಾಯಿ ಸಂಜೆ ಮನೆಗೆ ಬಂದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ಮರುದಿನ ತಾಯಿ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವೀನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್.ಜಯಶ್ರೀಯವರು ಆರೇ ತಿಂಗಳಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಬಾಲಕಿ ಮತ್ತಾಕೆಯ ತಾಯಿ, ಇಬ್ಬರು ಪೊಲೀಸರ ಸಾಕ್ಷಿಗಳನ್ನು ಪರಿಗಣಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News