ಚಿಕ್ಕಮಗಳೂರು: ಅಪಘಾತದಿಂದ ಬೆಳಕಿಗೆ ಬಂದ ಶ್ರೀಗಂಧ ಕಳ್ಳ ಸಾಗಣೆ; 5 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶಕ್ಕೆ

Update: 2018-08-30 17:57 GMT

ಚಿಕ್ಕಮಗಳೂರು, ಆ.30: ಅರಣ್ಯಾಧಿಕಾರಿಗಳ ಕಟ್ಟುನಿಟ್ಟಿನ ಕಾರ್ಯಾಚರಣೆ ನಡುವೆಯೂ ಜಿಲ್ಲೆಯಾದ್ಯಂತ ಶ್ರೀಗಂಧದ ಮರಗಳ ಕಳ್ಳಸಾಗಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲೆಯ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವೇಳೆ ನಡೆದ ಅಪಾಘಾತವೊಂದು ಪುರಾವೆ ಒದಗಿಸಿದೆ.

ಚಿಕ್ಕಮಗಳೂರಿನಿಂದ ಆಲ್ದೂರು ಮಾರ್ಗವಾಗಿ ಮಂಗಳೂರಿನತ್ತ ಹೊರಟಿದ್ದ ಪಿಕಪ್ ವಾಹನವೊಂದು ಬುಧವಾರ ಸಂಜೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಯೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ವಾಹನ ಚಾಲಕ ಹಾಗೂ ವಾಹನದಲ್ಲಿದ್ದ ಮತ್ತಿಬ್ಬರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ಲಾರಿ ಢಿಕ್ಕಿಯಾದ ರಭಸಕ್ಕೆ ಪಿಕಪ್‍ನ ಕೆಲ ಭಾಗ ಕಿತ್ತು ಬಂದಿತ್ತು. ಅಪಘಾತವಾಗುತ್ತಿದ್ದ ವಾಹನ ಜಖಂಗೊಂಡಿದ್ದನ್ನು ಕಂಡ ವಾಹನ ಚಾಲಕ ಹಾಗೂ ಮತ್ತಿಬ್ಬರು ವಾಹನವನ್ನು ಅಲ್ಲೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿದ್ದರು. ಈ ವೇಳೆ ಸ್ಥಳೀಯರು ವಾಹನದಲ್ಲಿದ್ದವರ ನಡವಳಿಕೆ ಕಂಡು ಬೆಚ್ಚಿಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗದಿದ್ದರೂ ಓಡಿ ಹೋದ ಬಗ್ಗೆ ಆಶ್ಚರ್ಯಕ್ಕೀಡಾಗಿದ್ದರು. ಆದರೆ ಅಸಲಿಯತ್ತು ತಿಳಿದ ಮೇಲೆ ಸ್ಥಳಕ್ಕೆ ಬಂದ ಪೊಲೀಸರು ಮೂಕವಿಸ್ಮಿತರಾಗಿದ್ದರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿ ವಾಹನ ಪರಿಶೀಲಿಸಿದ ಪೊಲೀಸರು ಸೂಕ್ಷ್ಮವಾಗಿ ವಾಹನ ಪರಿಶೀಲಿಸಿದಾಗ ಪಿಕಪ್ ವಾಹನದ ಅಡಿಯಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳಿರುವುದು ಪತ್ತೆಯಾಗಿದೆ. ಶ್ರೀಗಂಧಚೋರರು ವಾಹನದ ಅಡಿಯಲ್ಲಿ ಶ್ರೀಗಂಧ ಕಳ್ಳಸಾಗಣೆಗಾಗಿಯೇ ಪೆಟ್ಟಿಗೆಯಂತಹ ಸಾಧನವನ್ನು ಅಳವಡಿಸಿ ಶ್ರೀಗಂಧ ತುಂಬಿಸಿಟ್ಟಿದ್ದರು. ವಾಹನ ಜಖಂಗೊಂಡು ಈ ಪೆಟ್ಟಿಗೆ ಒಡೆದಿದ್ದರಿಂದ ಗುಟ್ಟು ರಟ್ಟಾಗುವ ಭೀತಿಯಿಂದ ಸ್ಥಳದಿಂದ ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.

ಸದ್ಯ ಆಲ್ದೂರು ಪೊಲೀಸರು ವಾಹನದ ನಂಬರ್ ಮೂಲಕ ಆರೋಪಿಗಳ ಪತ್ತೆಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆಂದು ತಿಳಿದು ಬಂದಿದ್ದು, ಜಿಲ್ಲೆಯಲ್ಲಿ ಶ್ರೀಗಂಧ ಚೋರರ ದೊಡ್ಡ ಜಾಲವಿದ್ದು, ಇಲ್ಲಿನ ಅರಣ್ಯಗಳಿಂದ ಲೂಟಿ ಮಾಡಿದ ಶ್ರೀಗಂಧವನ್ನು ಮಂಗಳೂರು ಮೂಲಕ ಹೊರ ದೇಶಗಳಿಗೆ ಕಳ್ಳ ಸಾಗಣೆ ಮಾಡಿ ಅಪಾರ ಹಣ ಮಾಡುತ್ತಿದ್ದಾರೆಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ನೂರಾರು ಚೆಕ್ ಪೋಸ್ಟ್‍ಗಳಿದ್ದು, ತನಿಖಾಧಿಕಾರಿಗಳಿಗೆ ಶ್ರೀಗಂಧಚೋರರು ಚಳ್ಳೇಹಣ್ಣು ತಿನ್ನಿಸಿ ವಾಹನಗಳ ಮೂಲಕ ಹೀಗೆ ಶ್ರೀಗಂಧವನ್ನು ರಾಜಾರೋಷವಾಗಿ ಕಳ್ಳ ಸಾಗಣೆ ಮಾಡುತ್ತಿರುವುದರಿಂದ ಅರಣ್ಯಾ ಇಲಾಖೆಯ ಚೆಕ್ ಪೋಸ್ಟ್‍ಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News