×
Ad

ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಆಹಾರ ಕಿಟ್ ವಿತರಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ

Update: 2018-08-30 23:38 IST

ಮಡಿಕೇರಿ, ಆ.30 : ತೀವ್ರ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶದ ಕುಟುಂಬಗಳಿಗೆ ಕೂಡಲೇ ಆಹಾರ ಕಿಟ್‍ಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ತಲುಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಷಷ್ಟ ನಿರ್ದೇಶನ ನೀಡಿದ್ದಾರೆ.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನದಂತೆ ನ್ಯಾಯಬೆಲೆ ಅಂಗಡಿ ಮೂಲಕವೇ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಸೂಚನೆ ನೀಡಿದ್ದು, ಅದರಂತೆ ಅನುಸರಿಸಬೇಕು ಎಂದು ಹೇಳಿದರು. 

ಈಗಾಗಲೇ ಆಹಾರ ಮತ್ತು ನಾಗರಿಕ ಸಚಿವರು 50 ಸಾವಿರ ಸಂತ್ರಸ್ತ ಕುಟುಂಬಗಳಿಗೆ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್‍ಗಳನ್ನು ವಿತರಿಸಲು ಚಾಲನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ತೀವ್ರ ಅತಿವೃಷ್ಟಿಗೆ ತುತ್ತಾಗಿರುವ ಮದೆ, ಮಕ್ಕಂದೂರು, ಗಾಳಿಬೀಡು, ಮಾದಾಪುರ ಮತ್ತಿತರ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಕೂಡಲೇ ಆಹಾರ ಕಿಟ್‍ಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಹಾಗೆಯೇ ಮುಟ್ಲು, ಹಮ್ಮಿಯಾಲ, ಕಾಲೂರು, ಗರ್ವಾಲೆ, ಸೂರ್ಲಬ್ಬಿ ಮತ್ತಿತರ ಗ್ರಾಮಗಳಿಗೆ ಸಂಚಾರಿ ವಾಹನದ ಮೂಲಕ ಆಹಾರ ಕಿಟ್‍ಗಳನ್ನು ವಿತರಿಸುವಂತೆ ತಿಳಿಸಿದರು.

ಆಹಾರ ಕಿಟ್ ವಿತರಿಸುವ ಸಂಬಂಧ ಹೆಚ್ಚುವರಿ ಸಂಚಾರಿ ವಾಹನ ಅಗತ್ಯವಿದ್ದಲ್ಲಿ ಮೈಸೂರಿನಿಂದ ತರಿಸಿಕೊಳ್ಳಬೇಕು. ಹಾಗೆಯೇ ಮೊಬೈಲ್ ವಾಹನ ಗ್ರಾಮಕ್ಕೆ ಹೋಗುವ ಮೊದಲೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು. 

ಈಗಾಗಲೇ 10 ಸಾವಿರ ಆಹಾರ ಕಿಟ್‍ಗಳು ಬಂದಿದ್ದು, ವಿತರಣೆಯಾಗುತ್ತಿದೆ. ಉಳಿದ 40 ಸಾವಿರ ಆಹಾರ ಕಿಟ್‍ಗಳನ್ನು ಇಂದೇ ತರಿಸಿಕೊಂಡು ತ್ವರಿತವಾಗಿ ಆಹಾರ ಕಿಟ್ ವಿತರಿಸುವಂತೆ ತಿಳಿಸಿದರು.

ಹಾಗೆಯೇ ಹೆಚ್ಚುವರಿ ಸೀಮೆ ಎಣ್ಣೆಯನ್ನು ತರಿಸಿಕೊಂಡು ಅತಿವೃಷ್ಟಿ ಪ್ರದೇಶದಲ್ಲಿರುವ ಕುಟುಂಬಗಳಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಸದಾಶಿವ, ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಆಹಾರ ಇಲಾಖೆಯ ಇನ್ಸ್‍ಪೆಕ್ಟರ್ ಗಳು, ಐಎಎಸ್ ಪ್ರೊಬೆಷನರ್ ಅಧಿಕಾರಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News