ಸ್ವಪ್ನಾಗೆ 10 ಲಕ್ಷ ರೂ.ಬಹುಮಾನ ಘೋಷಿಸಿದ ಪ.ಬಂಗಾಳ ಸರಕಾರ

Update: 2018-08-30 18:27 GMT

ಕೋಲ್ಕತಾ, ಆ.30: ಏಶ್ಯನ್ ಗೇಮ್ಸ್‌ನಲ್ಲಿ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಸ್ವಪ್ನಾ ಬರ್ಮನ್‌ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 10 ಲಕ್ಷ ರೂ. ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.

ಸ್ವಪ್ನಾ ಬುಧವಾರ ನಡೆದ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದರು. ‘‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ವಪ್ನಾಗೆ 10 ಲಕ್ಷ ರೂ.ಬಹುಮಾನದ ಜೊತೆಗೆ ಸರಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಂಗಾಳದ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್ ಸ್ವಪ್ನಾ ಅವರ ಮನೆಗೆ ತೆರಳಿ ಅವರ ತಾಯಿಗೆ ಎಲ್ಲ ಬೆಂಬಲ ನೀಡುವ ಆಶ್ವಾಸನೆ ನೀಡಿದ್ದಾರೆ’’ ಎಂದು ಪಶ್ಚಿಮ ಬಂಗಾಳ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಕಮಲ್ ಮೈತ್ರಾ ಹೇಳಿದ್ದಾರೆ.

‘‘ಸ್ವಪ್ನಾ ಸೆ.3 ಅಥವಾ 4 ರಂದು ಸ್ವದೇಶಕ್ಕೆ ವಾಪಸಾಗುವ ಸಾಧ್ಯತೆಯಿದ್ದು ಪಶ್ಚಿಮ ಬಂಗಾಳ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ಜಲ್‌ಪೈಗುರಿಯಲ್ಲಿ ‘ಗೋಲ್ಡನ್ ಗರ್ಲ್’ ಸ್ವಪ್ನಾಗೆ ಸನ್ಮಾನಿಸಲಾಗುವುದು’’ ಎಂದು ಮೈತ್ರಾ ಹೇಳಿದ್ದಾರೆ.

ಏಳು ಸ್ಪರ್ಧೆಗಳ ಹೆಪ್ಟಾಥ್ಲಾನ್‌ನಲ್ಲಿ ಒಟ್ಟು 6,026 ಅಂಕ ಗಳಿಸಿದ್ದ 21ರ ಹರೆಯದ ಸ್ವಪ್ನಾ ಏಶ್ಯನ್ ಗೇಮ್ಸ್‌ನಲ್ಲಿ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಸ್ವಪ್ನಾ ಸಾಧನೆಗೆ ಬಂಗಾಳದ ಐಕಾನ್ ಸೌರವ್ ಗಂಗುಲಿ ಸಹಿತ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರ ಹರಿದುಬಂದಿದೆ.

ಸ್ವಪ್ನಾ ಬಡತನದ ವಿರುದ್ಧ ಸೆಣಸಾಡುವ ಜೊತೆಗೆ ಎರಡೂ ಕಾಲುಗಳಲ್ಲಿ ಆರು ಬೆರಳುಗಳಿರುವ ಕಾರಣ ಸರಿಯಾದ ಶೂ ಧರಿಸಲು ಸಾಧ್ಯವಾಗದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News