ಕೊಳ್ಳೇಗಾಲ: ನಗರಸಭೆ ಚುನಾವಣೆ ಬಹುತೇಕ ಶಾಂತಿಯುತ; ಶೇ.72.52 ರಷ್ಟು ಮತದಾನ

Update: 2018-08-31 14:38 GMT

ಕೊಳ್ಳೇಗಾಲ.ಆ.31: ನಗರಸಭೆ ಚುನಾವಣೆಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.72.52 ರಷ್ಟು ಮತದಾನ ನಡೆದಿದೆ.

ನಗರದಲ್ಲಿ ಶುಕ್ರವಾರ ಬೆಳ್ಳಿಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾರರು ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ನಿರ್ಭೀತಿಯಿಂದ ಮತದಾನ ಮಾಡಿದರು. ಒಟ್ಟು 29 ವಾರ್ಡ್‍ಗಳಲ್ಲಿ 43 ಮತಗಟ್ಟೆಗಳನ್ನು ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಲಾಗಿತ್ತು. 

ಗಣ್ಯರ ಮತದಾನ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್‍ರವರು ನಗರದ 1 ನೇ ವಾರ್ಡಿಗೆ ಸೇರಿದ ಎಂ.ಸಿ.ಕೆ.ಸಿ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 2 ರಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹಾಗೂ ಅವರ ಪತ್ನಿ ಶೋಭಾರಾಣಿ, ಅವರ ಪುತ್ರ ಲೋಕೇಶ್‍ರವರು 21 ನೇ ವಾರ್ಡಿನ ಮಂಜುನಾಥನಗರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 31 ರಲ್ಲಿ ಮತದಾನ ಮಾಡಿದರು.

ಮತದಾನದ ವೇಳೆ ಅಂಗವಿಕಲರು, ವೃದ್ದರು, ಮಹಿಳೆಯರು, ಯುವಕರು ಹಾಗೂ ಯುವತಿಯರು ಸೇರಿದಂತೆ ಅನೇಕರು ಸಂತೋಷದಿಂದ ಮತದಾನ ಮಾಡುವ ಮೂಲಕ ಅವರ ಹಕ್ಕು ಚಲಾಯಿಸಿದರು.

ನಗರದಲ್ಲಿ ಮಧ್ಯಾಹ್ನದವರೆಗೆ ಮತದಾನವು ಮಂದಗತಿಯಲ್ಲಿ ಸಾಗಿತು. ಸಂಜೆಯಾಗುತ್ತಿದಂತೆ ಮತದಾರರು ಸಾಲುಗಟ್ಟಿ ಮತದಾನ ಮಾಡಲು ನಿಂತಿದ್ದ ದೃಶ್ಯ ಕಂಡು ಬಂತು.

ನಗರದ ಸಂತೇಪೇಟೆ ಮತಗಟ್ಟೆ ಬಳಿ ಬಿಎಲ್‍ಒ ಗಳ ಬಗ್ಗೆ ಅಸಮಾಧಾನಗೊಂಡು ಮತಗಟ್ಟೆ ಕೇಂದ್ರದ ಬಳಿ ಗೊಂದಲ ಉಂಟಾಗಿ, ಪೊಲೀಸರು ಲಾಠಿ ಬೀಸುವ ಮೂಲಕ ಗುಂಪನ್ನು ಚದುರಿಸಿ ತಿಳಿಗೊಳಿಸುವ ಘಟನೆ ಬಿಟ್ಟರೆ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತ ಮತದಾನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News