ಸೆ.9 ರವರೆಗೆ ಕೊಡಗಿಗೆ ಪ್ರವಾಸಿಗರು ಬರುವಂತಿಲ್ಲ: ಜಿಲ್ಲಾಧಿಕಾರಿ ಆದೇಶ

Update: 2018-08-31 14:55 GMT

ಮಡಿಕೇರಿ, ಆ.31: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವೇಶ ನೀಡುವ ಪ್ರವಾಸಿಗರ ಮೇಲಿನ ನಿಷೇಧವನ್ನು ಜಿಲ್ಲಾಡಳಿತ ಮತ್ತೆ ಸೆ.9 ರವರೆಗೆ ವಿಸ್ತರಿಸಿದೆ.

ಈ ಸಂಬಂಧ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ.ಐ.ಶ್ರೀ ವಿದ್ಯಾ ಅವರು ಶುಕ್ರವಾರ ಮರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ರಸ್ತೆಗಳಿಗೆ ಹಾನಿಯಾಗಿದ್ದು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಟೇಲ್, ರೆಸಾರ್ಟ್, ಹೋಂಸ್ಟೇ ಹಾಗೂ ಇತರ ಖಾಸಗಿ ವಸತಿಗೃಹಗಳಲ್ಲಿ ಪ್ರವಾಸಿಗರ ಹಾಗೂ ಇತರ ಅತಿಥಿಗಳ ವಾಸ್ತವ್ಯವನ್ನು ಆ.31ರವರೆಗೆ ಕಡ್ಡಾಯವಾಗಿ ರದ್ದುಪಡಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಆದರೆ ಜಿಲ್ಲೆಯಲ್ಲಿ ಈಗಲೂ ಮಳೆಯಾಗುತ್ತಿದ್ದು, ಹಾನಿಯಾದ ಪ್ರದೇಶ, ಮಾರ್ಗಗಳು ಪೂರ್ಣವಾಗಿ ದುರಸ್ತಿಯಾಗದೇ ಇರುವುದರಿಂದ ಮತ್ತು ಹಾನಿಗೊಂಡ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಿ ಪ್ರಾಣ ಹಾನಿ ಹಾಗೂ ಇತರೆ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಇನ್ನೂ 7ದಿನಗಳ ಕಾಲ ನಿಷೇಧ ಹೇರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೆ.9ರವರೆಗೆ ಪ್ರವಾಸಿಗರಿಗೆ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News