ಸ್ಥಳೀಯ ಸಂಸ್ಥೆ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ ಶೇ.68.10 ಮತದಾನ

Update: 2018-08-31 15:46 GMT

ಮಂಡ್ಯ, ಆ.31: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ.68.10 ರಷ್ಟು ಮತದಾನವಾಗಿದೆ. ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು.

ಮಂಡ್ಯ ನಗರಸಭೆಯ 35 ವಾರ್ಡ್, ಮದ್ದೂರು ಪುರಸಭೆಯ 23, ಪಾಂಡವಪುರ ಪುರಸಭೆಯ 23, ನಾಗಮಂಗಲ ಪುರಸಭೆಯ 23 ಹಾಗೂ ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣ ಪಂಚಾಯತ್ ನ 13 ವಾರ್ಡ್‍ಗಳಿಗೆ ಚುನಾವಣೆ ನಡೆಯಿತು. ಐದು ಸಂಸ್ಥೆಗಳ ವ್ಯಾಪ್ತಿಯಲ್ಲಿ 89,678 ಪುರುಷರು, 93,085 ಮಹಿಳೆಯರು, ಇತರೆ ವರ್ಗದ 29 ಮಂದಿ ಸೇರಿದಂತೆ 1,82,792 ಮತದಾರರಿದ್ದು, 1,24,479 ಮತದಾರರು(ಶೇ.68.10) ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.  

ಮಂಡ್ಯ ನಗರಸಭೆಗೆ ಶೇ.61.73, ಮದ್ದೂರು ಪುರಸಭೆಗೆ ಶೇ.72.98, ಪಾಂಡವಪುರ ಪುರಸಭೆಗೆ ಶೇ. 81.74, ನಾಗಮಂಗಲ ಪುರಸಭೆಗೆ ಶೇ.81.26 ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿಗೆ ಶೇ. 82.46ರಷ್ಟು ಮತದಾನ ನಡೆದಿದೆ.

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 55,982 ಪುರುಷರು, 58,475 ಮಹಿಳೆಯರು ಹಾಗೂ ಇತರೆ ವರ್ಗದ 24 ಮಂದಿ ಸೇರಿದಂತೆ 1,14,481 ಮತದಾರರಿದ್ದು, ಈ ಪೈಕಿ 34,850 ಪುರುಷರು, 35,808 ಮಹಿಳೆಯವರು ಹಾಗೂ ಇತರೆ ವರ್ಗದ 8 ಮಂದಿ ಮತದಾರರು ಸೇರಿದಂತೆ 70,666 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮದ್ದೂರು ಪುರಸಭೆ ವ್ಯಾಪ್ತಿಯ 11,105 ಪುರುಷರು, 11,606 ಮಹಿಳೆಯರು ಹಾಗೂ ಇತರೆ ವರ್ಗದ 5 ಮಂದಿ ಸೇರಿದಂತೆ ಒಟ್ಟು 22,716 ಮತದಾರರ ಪೈಕಿ 8,086 ಪುರುಷರು, 8,487 ಮಹಿಳೆಯರು ಹಾಗೂ ಇತರೆ ವರ್ಗದ 5 ಮಂದಿ ಮತದಾರರು ಸೇರಿದಂತೆ 16,578 ಮತದಾರರು ಮತಹಾಕಿದ್ದಾರೆ. ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ 7,696 ಪುರುಷರು, 7,980 ಮಹಿಳೆಯರು ಸೇರಿದಂತೆ 15,676 ಮತದಾರರಿದ್ದಾರೆ. ಈ ಪೈಕಿ 6,241 ಪುರುಷರು, 6,573 ಮಹಿಳೆಯವರು ಸೇರಿ 12,814 ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ.

ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿ 10,448 ಪುರುಷರು, 10,345 ಮಹಿಳೆಯರು ಸೇರಿದಂತೆ 20,793 ಮತದಾರರಿದ್ದಾರೆ. ಈ ಪೈಕಿ 8,515 ಪುರುಷರು, 8,381 ಮಹಿಳೆಯರು ಸೇರಿ ಒಟ್ಟು 16,896 ಮಂದಿ ಮತ ಹಾಕಿದ್ದಾರೆ. ಬೆಳ್ಳೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  4,447 ಪುರುಷರು, 4,679 ಮಹಿಳೆಯರು ಸೇರಿದಂತೆ 9,126 ಮತದಾರರಿದ್ದಾರೆ. ಈ ಪೈಕಿ 3,784 ಪುರುಷರು, 3,741 ಮಹಿಳೆಯರು ಒಟ್ಟು 7,525 ಮತದಾರರು ಮತ ಹಾಕಿದ್ದಾರೆ.

ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಭೇಟಿ ನೀಡಿ ತಮ್ಮ ಹಕ್ಕನ್ನು ಚಲಾಯಿಸಿದರು. ಮಧ್ಯಾಹ್ನವಾಗುತ್ತಿದ್ದಂತೆ ಮತದಾನ ಚುರುಕುಗೊಂಡಿತು. ಕೆಲವು ಮತಗಟ್ಟೆಗಳಲ್ಲಿ ಮತದಾರರ ಸರತಿಸಾಲು ಕಂಡುಬಂದಿತು. ವೃದ್ಧ ಹಾಗೂ ವಿಕಲಚೇತನ ಮತದಾರರನ್ನು ವಾರ್ಡ್‍ನ ಅಭ್ಯರ್ಥಿ ಕಡೆಯವರು ವಾಹನದಲ್ಲಿ ಕರೆತಂದು, ಮತಗಟ್ಟೆಯಲ್ಲಿ ವ್ಯವಸ್ಥೆ ಮಾಡಿದ್ದ ವ್ಹೀಲ್ ಚೇರ್ ಮೂಲಕ ಮತಹಾಕಿಸಲು ಅನುವು ಮಾಡಿಕೊಟ್ಟರು. ಮತಗಟ್ಟೆ ಆವರಣದಲ್ಲೂ ಅಭ್ಯರ್ಥಿ ಮತ್ತು ಅವರ ಬೆಂಬಲಿಗರು ಮತದಾರರಲ್ಲಿ ಮತಯಾಚಿಸುವ ಮೂಲಕ ತಮ್ಮನ್ನು ಗೆಲ್ಲಿಸಲು ಮನವಿ ಮಾಡುತ್ತಿದ್ದರು. ಈ ವೇಳೆ ಕೆಲವು ಮತಗಟ್ಟೆ ಬಳಿ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯಿತು.

ನಾಗಮಂಗಲದ ವಾರ್ಡ್‍ವೊಂದರಲ್ಲಿ ವಯೋವೃದ್ದರ ಮತ ಚಲಾವಣೆಗೆ ಸಂಬಂಧಿಸಿದಂತೆ  ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಶುರುವಾಯಿತು. ಪೊಲೀಸರು ಲಘು ಲಾಠಿಬೀಸಿ ಚದುರಿಸಿದರು.

ಸೆ.3 ರಂದು ಫಲಿತಾಂಶ:
ಸೆ.3 ರಂದು ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಮಂಡ್ಯ ನಗರಸಭೆ ಚುನಾವಣೆ ಮತ ಎಣಿಕೆ, ಮದ್ದೂರಿನ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಮದ್ದೂರು ಪುರಸಭೆ ಚುನಾವಣೆ ಮತ ಎಣಿಕೆ, ಪಾಂಡವಪುರದ ಪಿ.ಎಸ್.ಎಸ್.ಕೆ. ಕಾಲೇಜಿನಲ್ಲಿ ಪಾಂಡವಪುರ ಪುರಸಭೆ ಮತ್ತು ಬೆಳ್ಳೂರು ಪಟ್ಟಣ ಪಂಚಾಯತಿ ಚುನಾವಣೆ ಮತ ಎಣಿಕೆ ನಾಗಮಂಗಲದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಹಕ್ಕು ಚಲಾಯಿಸಿದ ನವ ದಂಪತಿ
ನಗರದ 21ರ ಹಾಲಹಳ್ಳಿ ಬಡಾವಣೆಯಲ್ಲಿ ನಡೆಯುತ್ತಿದ್ದ ಮತದಾನ ಕೇಂದ್ರಕ್ಕೆ ಹೊಸದಾಗಿ ಮದುವೆಯಾದ ನೂತನ ದಂಪತಿ ಕಲ್ಯಾಣಮಂಟಪದಿಂದಲೇ ಆಗಮಿಸಿ ತಮ್ಮ  ಹಕ್ಕು ಚಲಾಯಿಸಿದರು.

ಪಲ್ಲವಿ ಮತ್ತು ಕೃಷ್ಣ ಮದುವೆಯಾಗಿ ಬಂದು ಮತ ಚಲಾಯಿಸಿದ ದಂಪತಿ. ಹಾಲಹಳ್ಳಿ ಬಡಾವಣೆಯ ನಿವಾಸಿಗಳಾದ ಇವರು ಗುತ್ತಲು ಬಡಾವಣೆಯ ಅರಕೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮದುವೆಯಾದರು.

ಮನವೊಲಿಕೆ ನಂತರ ಹಕ್ಕು ಚಲಾವಣೆ
ನಗರಸಭೆಯ 20ನೇ ವಾರ್ಡ್ ಮತದಾರರ ಮತಗಟ್ಟೆ ಬದಲಾವಣೆ ಹಿನ್ನೆಲೆಯಲ್ಲಿ ವಾರ್ಡ್ ವ್ಯಾಪ್ತಿಯ ಶಿವನಂಜೇಗೌಡ ಲೇಔಟ್‍ನ ಸುಮಾರು 500 ಮತದಾರರು ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಶಿವನಂಜೇಗೌಡ ಲೇಔಟ್‍ನ ನಿವಾಸಿಗಳು 20ನೇ ವಾರ್ಡ್‍ನಲ್ಲಿ ಮತದಾನ ಮಾಡುತ್ತಿದ್ದರು. ಆದರೆ, ಈ ಬಾರಿ ಈ ಲೇಔಟ್‍ನ ನಿವಾಸಿಗಳು 22ನೇ ವಾರ್ಡ್‍ನ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡುವಂತಾಗಿರುವುದು ಆಕ್ರೋಶಕ್ಕೆ ಕಾರಣವಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಮುಂದಿನ ಚುನಾವಣೆಗೆ 20ನೇ ವಾರ್ಡ್‍ನಲ್ಲೇ ಮತಹಾಕಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ, ಬಹಿಷ್ಕಾರ ಕೈಬಿಟ್ಟ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಬಾರದ ರಮ್ಯಾ:ಕಾರ್ಯಕರ್ತರಿಗೆ ನಿರಾಸೆ
ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮತದಾನ ಮಾಡಲು ಬಾರದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಿರಾಸೆಗೊಂಡರು.

ನಗರಸಭೆಯ 11ನೇ ವಾರ್ಡ್‍ನಲ್ಲಿ ರಮ್ಯಾ ಅವರ ಮತದಾನದ ಹಕ್ಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ರಮ್ಯಾ ಬಂದಿರಲಿಲ್ಲ. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬರಲಿದ್ದಾರೆಂಬ ನಿರೀಕ್ಷೆಯಿತ್ತು. 'ರಮ್ಯಾ ಅವರನ್ನು ನಾನು ದೂರವಾಣಿ ಮೂಲಕ ಸಂಪರ್ಕಿಸಿದ್ದೆ. ಆಗ ಅವರು ಚುನಾವಣೆ ಕ್ಯಾನ್ವಾಸ್ ಚೆನ್ನಾಗಿ ಮಾಡಿ, ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ನಾನು ಕೂಡ ಮತ ಚಲಾಯಿಸಲು ಮಂಡ್ಯಕ್ಕೆ ಬರುತ್ತಿದ್ದೇನೆ ಎಂದಿದ್ದರು' ಎಂದು 11ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ವಿಷಾದಿಸಿದರು.

ಜೆಡಿಎಸ್ ಕಾರ್ಯಕರ್ತರ ಬಂಧನ
ಮದ್ದೂರು ಪುರಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಬೀದಿಯಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಸರ್ವೇಶ, ಮಹೇಶ ಬಂಧಿತರು. ಇವರು ಪಟ್ಟಣದ ಕರ್ನಾಟಕ ಚಿತ್ರಮಂದಿರದ ಬಳಿ ಗುರುವಾರ ತಡರಾತ್ರಿ ಮಾರಕಾಸ್ತ್ರ ಹಿಡಿದು ಮತದಾರರಿಗೆ ಭೀತಿ ಮೂಡಿಸಲು ಯತ್ನಿಸಿದರು ಎನ್ನಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News